ಬೆಂಗಳೂರು : ಇಂದಿನಿಂದ ಆಟೋ ಪ್ರಯಾಣ ದರ ಏರಿಕೆಯಾಗಿದ್ದು, ಇದು ಆಟೋ ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ.
ಕೊರೊನಾದಿಂದಾಗಿ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಜಿಲ್ಲಾಡಳಿತಕ್ಕೆ ದರ ಏರಿಕೆ ಮಾಡುವಂತೆ ಹಲವು ಬಾರಿ ಆಟೋ ಸಂಘಟನೆಗಳು ಮನವಿ ಮಾಡಿದ್ದವು. ಅದರಂತೆ ಆಟೋ ಚಾಲಕರ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಇಂದಿನಿಂದ ಆಟೋ ದರ ಏರಿಕೆಗೊಳಿಸಲು ಅನುಮತಿ ನೀಡಿದ್ದಾರೆ. ಇದರಿಂದ ಆಟೋ ಚಾಲಕರು ಫುಲ್ ಖುಷ್ ಆಗಿದ್ದು 8 ವರ್ಷದ ಬಳಿಕ ದರ ಏರಿಕೆಯಾಗಿರುವುದರಿಂದ ಸಂಭ್ರಮಿಸುತ್ತಿದ್ದಾರೆ. ಆದರೆ ಆಟೋವನ್ನೇ ಅವಲಂಬಿಸಿದ್ದ ಜನಸಾಮಾನ್ಯರಿಗೆ ಹೊರೆಯಾಗಲಿದೆ.
ಈ ಹಿಂದೆ ಆಟೋದಲ್ಲಿ ಮಿನಿಮಮ್ ಚಾರ್ಚ್ 25 ರೂಪಾಯಿ ಇತ್ತು. ಇದೀಗ 5 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದ ಮಿನಿಮಮ್ ಚಾರ್ಜ್ 30ರೂ ಆಗಿದೆ. ಪ್ರತಿ ಕಿಲೋ ಮೀಟರ್ ಗೆ 13 ರೂಪಾಯಿಯಿಂದ 15 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ಮೊದಲು ಐದು ನಿಮಿಷ ಕಾಯುವಿಕೆ ಫ್ರೀ ಇದ್ದು, ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂಪಾಯಿ ಚಾರ್ಜ್ ಮಾಡಲು ಅವಕಾಶ ಕೊಡಲಾಗಿದೆ. ಅಲ್ಲದೇ ಉಚಿತವಾಗಿ 20 ಕೆಜಿ ವರೆಗೆ ಲಗೇಜ್ ಸಾಗಣೆ ಮಾಡಬಹುದು. ಆದರೆ 21ರಿಂದ 50ಕೆಜಿ ತೂಕದ ಲಗೇಜ್ ಇದ್ರೆ 5 ರೂಪಾಯಿ ಕೊಡಬೇಕಾಗಿದೆ. ಹಾಗೆ ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚುವರಿ (30+15) ದರ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.










