ಬೆಳಗಾವಿ : ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವೃದ್ಧ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರಿಗೆ ಹತ್ತು ಲಕ್ಷ ಪರಿಹಾರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ ಎಂದು ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಹೇಳಿದ್ದಾರೆ. ನಗರದಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಲುಷಿತ ನೀರು ಸೇವಿಸಿ ರಾಮದುರ್ಗದಲ್ಲಿ ಹಲವಾರು ಜನರು ಅಸ್ವಸ್ಥರಾಗಿದ್ದಾರೆ. ಸದ್ಯಕ್ಕೆ ಎಲ್ಲರ ಆರೋಗ್ಯವೂ ಸ್ಥಿರವಾಗಿದೆ ಎಂದರು.
ಅಸ್ವಸ್ಥರ ಕುರಿತು ಹೆಚ್ಚಿನ ಕಾಳಜಿ ವಹಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಡಿಎಚ್ಒ ಅವರಿಗೆ ಸೂಚಿಸಿದ್ದೇನೆ. ಇನ್ನು ಮುದೇನೂರ ಗ್ರಾಮದಲ್ಲಿ ಆರ್ ಓ ಪ್ಲಾಂಟ್ ಇದೆ. ಜನರು ಆರ್ ಓ ಪ್ಲಾಂಟ್ ನೀರನ್ನೇ ಕುಡಿಯಬೇಕು. ಸಿಎಂ ಜೊತೆ ಮಾತಾಡಿ ಮೃತ ಶಿವಪ್ಪ ಕುಟುಂಬಕ್ಕೆ 10 ಲಕ್ಷ ಪರಿಹಾರ ಕೇಳಿದ್ದೇನೆ. ಅದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ನಲ್ಲಿಗಳ ಮೂಲಕ ಶುದ್ಧವಾದ ನೀರು ಕೊಡುವ ಪ್ರಯತ್ನ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮುದೇನೂರು ಜನರು ಪೈಪ್ಲೈನ್ ಮತ್ತು ಬೋರವೇಲ್ ಗಳಿಂದ ನೀರನ್ನು ಕುಡಿಯಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.










