ಬೆಂಗಳೂರು: ರಾಜ್ಯ ಸರ್ಕಾರ ಬಡವರಿಗೆ ಮರಳಿ ಬಿಪಿಎಲ್ ಕಾರ್ಡ್ ನೀಡಬೇಕು. ಕಾರ್ಡ್ ರದ್ದು ಪ್ರಕ್ರಿಯೆ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವೃಷಭಾವತಿ ನಗರ, ನಂದಿನಿ ಲೇಔಟ್ ಗಳಲ್ಲಿ ಬಿಪಿಎಲ್ ಕಾರ್ಡ್ ರದ್ದುಗೊಂಡ ಕುಟುಂಬದವರನ್ನು ಶಾಸಕರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ ಮತ್ತು ಕೆ.ಗೋಪಾಲಯ್ಯ ಅವರೊಂದಿಗೆ ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದರು. ಆ ಬಳಿಕ ಮಾತನಾಡಿದ ಅಶೋಕ್, ಜನರಿಗೆ ಅನ್ನ ಕೊಡಬೇಕಿದ್ದ ಸರ್ಕಾರ ಅನ್ನಕ್ಕೆ ಕನ್ನ ಹಾಕುವ ಕೆಲಸ ಮಾಡುತ್ತಿದೆ. ಯಾರೂ ಹಸಿವಿನಿಂದ ಸಾಯಬಾರದು ಎಂಬ ಪ್ರಜ್ಞೆ ಸರ್ಕಾರಕ್ಕೆ ಇರಬೇಕು. ಬಿಪಿಎಲ್ ಕಾರ್ಡ್ ಕಳೆದುಕೊಂಡವರು ಯಾರೂ ಶ್ರೀಮಂತರಲ್ಲ, ಅವರೆಲ್ಲ ಕಾರಿನಲ್ಲಿ ಓಡಾಡುವುದಿಲ್ಲ. 2 ವರ್ಷದ ಮಗು ಇರುವ ಮಹಿಳೆ ಗಾಮೆರ್ಂಟ್ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಅಂಗವಿಕಲ ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿ ಬಜ್ಜಿ ಮಾರಾಟ ಮಾಡುತ್ತಿದ್ದು, ಅನಾರೋಗ್ಯದಿಂದಾಗಿ ಕೆಲಸಕ್ಕೆ ಹೋಗುತ್ತಿಲ್ಲ. ಇಂತಹ ಬಡ ಕುಟುಂಬದ ಜನರ ಮನೆಗೆ ಸಿಎಂ ಸಿದ್ದರಾಮಯ್ಯ ಕನ್ನ ಹಾಕಿದ್ದಾರೆ ಎಂದು ದೂರಿದರು.










