ಲಂಡನ್ : ಕೊರೊನಾದ ಆತಂಕದ ಬೆನ್ನಲ್ಲೇ ಮತ್ತೊಂದು ಕೊರೊನಾ ರೂಪಾಂತರಿ ತಳಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಹೊಸ ರೂಪಾಂತರ ತಳಿಗೆ ವಿಶ್ವಸಂಸ್ಥೆ ‘ಒಮಿಕ್ರೋನ್’ ಎಂದು ಹೆಸರಿಟ್ಟಿದೆ.
ನವೆಂಬರ್ 9ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ರೂಪಾಂತರಿ ತಳಿ ಪತ್ತೆ ಆಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಸೋಂಕು ಅತೀ ವೇಗದಲ್ಲಿ ಹಬ್ಬುತ್ತಿದ್ದು, ಅದಕ್ಕೆ ಒಮಿಕ್ರಾನ್ ಕಾರಣ ಎನ್ನಲಾಗಿದೆ. ಈ ತಳಿಯಿಂದ ಒಬ್ಬ ವ್ಯಕ್ತಿಯಿಂದ ಉಳಿದವರಿಗೆ ಸೋಂಕು ಹಬ್ಬುವ ಪ್ರಮಾಣ ಡೆಲ್ಟಾ, ಡೆಲ್ಟಾ ಪ್ಲಸ್ ಗೆ ಹೋಲಿಸಿದರೆ ಹೆಚ್ಚು ಎಂದು ಆರೋಗ್ಯ ಸಂಸ್ಥೆ ಹೇಳಿದೆ. ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ 77 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದ್ದು, ವಿಶ್ವಾದ್ಯಂತ 87 ಮಂದಿಯಲ್ಲಿ ಕಾಣಿಸಿಕೊಂಡಿದೆ.
‘ಒಮಿಕ್ರೋನ್’ ಆತಂಕ ಹಿನ್ನೆಲೆ ಹಲವು ದೇಶಗಳು ದಕ್ಷಿಣ ಆಫ್ರಿಕಾಕ್ಕೆ ಮತ್ತು ಅಲ್ಲಿಂದ ಬೇರೆಡೆಗೆ ಪ್ರಯಾಣವನ್ನು ನಿಷೇಧಿಸಲು ಅಥವಾ ನಿರ್ಬಂಧಿಸಲು ನಿರ್ಧರಿಸಿದ್ದು, ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ ಮತ್ತು ಹಾಂಗ್ ಕಾಂಗ್ನಿಂದ ಆಗಮಿಸುವ ಪ್ರಯಾಣಿಕರಿಗೆ ಭಾರತವು ಹೆಚ್ಚು ಕಠಿಣ ತಪಾಸಣೆ ಮತ್ತು ಪರೀಕ್ಷೆಗೆ ಆದೇಶಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.










