ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲವೆಂದು ಒಳಗೆ ಸೇರಿಸದ ಸಿಬ್ಬಂದಿ- ಆಸ್ಪತ್ರೆ ಆವರಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ…

142
firstsuddi

ಹಾಸನ : ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲವೆಂದು ಆಸ್ಪತ್ರೆಯ ಒಳಗೆ ಸೇರಿಸಿಕೊಳ್ಳದ ಪರಿಣಾಮ ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆ ಆವರಣದಲ್ಲೇ ನರಳಾಡಿರುವ ಘಟನೆ ತಾಲ್ಲೂಕಿನ ಶಾಂತಿಗ್ರಾಮ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ತಾಲ್ಲೂಕಿನ ಹಲಸಿನಹಳ್ಳಿ ಗ್ರಾಮದ ನಿವಾಸಿಯಾಗಿರುವ ಹೇಮಾ ಅವರು ಕಳೆದ ರಾತ್ರಿ 11.30ಕ್ಕೆ ಹೆರಿಗೆಗೆಂದು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಕೋವಿಡ್ ನೆಗೆಟಿವ್ ರಿಪೋರ್ಟ್ ಕೇಳಿದ್ದಾರೆ. ಆದರೆ ಹೇಮಾ ಅವರ ಬಳಿ ರಿಪೋರ್ಟ್ ಇಲ್ಲದ ಕಾರಣ ಅವರನ್ನು ಆಸ್ಪತ್ರೆ ಒಳಗೆ ಸೇರಿಸಿಲ್ಲ. 24*7 ಹೆರಿಗೆ ಆಸ್ಪತ್ರೆಯಾದರೂ ಆರೋಗ್ಯ ಇಲಾಖೆ ಸಿಬ್ಬಂದಿ ಮಾನವೀಯತೆ ಮರೆತಂತೆ ನಡೆದುಕೊಂಡಿದ್ದಾರೆ. ಗರ್ಭಿಣಿ ಕೂಗಾಡಿ ನರಳಾಡಿದರೂ ಆಸ್ಪತ್ರೆ ಸಿಬ್ಬಂದಿ ನೆರವಿಗೆ ಬರಲಿಲ್ಲ ಎಂದು ಗರ್ಭಿಣಿ ಕುಟುಂಬಸ್ಥರು ಹಾಗೂ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕೊನೆಗೆ ಆಸ್ಪತ್ರೆ ಆವರಣದಲ್ಲೇ ಗರ್ಭಿಣಿ ಒದ್ದಾಡಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಯಾದ ಬಳಿಕ ಆಕೆಯ ಕುಟುಂಬಸ್ಥರು ಆಂಬ್ಯುಲೆನ್ಸ್ ನಲ್ಲಿ ಮಗು ಹಾಗೂ ಹೇಮಾ ಅವರನ್ನು ಹಾಸನಕ್ಕೆ ಕರೆದುಕೊಂಡು ಹೋಗಿದ್ದಾರೆ.