ಕೋಲಾರ: ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಅಲ್ಲಿಕಲ್ಲಿ ಗ್ರಾಮದ ಸರ್ಕಾರಿ ಹಿರಿಯ ಶಾಲೆಯಲ್ಲಿ ಗಣೇಶ ಮೂರ್ತಿಗೆ ಪೂಜೆ ಮಾಡಿದ ವಿದ್ಯಾರ್ಥಿನಿಗೆ ಥಳಿಸಿ ಕೈಮುರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಕೋಲಾರ ಡಿಡಿಪಿಐ ಕೃಷ್ಣಮೂರ್ತಿ ಈ ಆದೇಶ ಹೊರಡಿಸಿದ್ದಾರೆ.
ಅಲ್ಲಿಕಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ಹೇಮಲತಾ ಅವರು, ಕಳೆದ ವಾರ ವಿದ್ಯಾರ್ಥಿನಿ ಭವ್ಯ ಶ್ರೀ ಎಂಬ ವಿದ್ಯಾರ್ಥಿನಿಗೆ ಥಳಿಸಿ ಎಡಗೈ ಮುರಿದಿದ್ದರು. ಈ ಸಂಬಂಧ ಪೋಷಕರು ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ವಿರುದ್ಧ ದೂರು ನೀಡಿದ್ದರು. ಅಲ್ಲದೇ ಮುಖ್ಯ ಶಿಕ್ಷಕಿ ಹೇಮಲತಾರನ್ನ ಅಮಾನತು ಮಾಡುವಂತೆ ಪಟ್ಟು ಹಿಡಿದಿದ್ದರು.
ಬಳಿಕ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯ ಯೋಗ ಕ್ಷೇಮ ವಿಚಾರಿಸಿದ ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟ ರಾಮಾಚಾರಿ ಶಾಲಾ ಮಕ್ಕಳ ಪೋಷಕರಿಗೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಅಂತೆಯೇ ಮುಖ್ಯ ಶಿಕ್ಷಕಿ ಹೇಮಲತಾ ಅವರನ್ನು ಶಿಕ್ಷಣಾಧಿಕಾರಿ ಮುನಿವೆಂಕಟ ರಾಮಾಚಾರಿ ನೀಡಿದ ವರದಿ ಆಧರಿಸಿ ಡಿಡಿಪಿಐ ಕೃಷ್ಣಮೂರ್ತಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.










