ಚಿತ್ರದುರ್ಗ : ಮಕ್ಕಳಲ್ಲಿ ವಿಚಿತ್ರ ವೈರಲ್ ಫೀವರ್ ಕಾಣಿಸಿಕೊಂಡಿದ್ದು, ಸರ್ಕಾರಿ ಜಿಲ್ಲಾಸ್ಪತ್ರೆ ಹೌಸ್ ಫುಲ್ ಆಗಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಬೆಡ್ ಗಳಿಲ್ಲದೇ ಚಿಕಿತ್ಸೆಗಾಗಿ ಪರದಾಡುವಂತಾಗಿದೆ.
ಹಸುಗೂಸುಗಳು ಸೇರಿದಂತೆ 9 ವರ್ಷದೊಳಗಿನ ಮಕ್ಕಳು ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದು, ಇದರಿಂದಾಗಿ ಸರ್ಕಾರಿ ಜಿಲ್ಲಾಸ್ಪತ್ರೆ ಹೌಸ್ ಫುಲ್ ಆಗಿದೆ. ಈ ಹಿನ್ನೆಲೆ ನೆಲವೇ ಮಕ್ಕಳಿಗೆ ಆಸರೆಯಾಗಿದೆ. ತೀವ್ರವಾದ ಆಯಾಸದಿಂದ ಹಸುಗೂಸುಗಳು ನಿತ್ರಾಣಗೊಳ್ಳುತ್ತಿದ್ದು ಅವರನ್ನು ನೋಡಿ ಪೋಷಕರು ಆತಂಕಗೊಂಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ ಡಿಹೆಚ್ಓ ಡಾ.ರಂಗನಾಥ್ ಅವರು, ಜಿಲ್ಲೆಯಲ್ಲಿ ಒಟ್ಟು 215 ಮಕ್ಕಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 12 ಮಕ್ಕಳ ಗಂಟಲು, ಮೂಗು ದ್ರಾವಣವನ್ನು ಎನ್.ಐ.ವಿ ಲ್ಯಾಬ್ ಗೆ ಕಳುಹಿಸಲಾಗಿದೆ. ಇದಕ್ಕೂ ಮೊದಲು ಕಳುಹಿಸಲಾಗಿದ್ದ 12 ಮಕ್ಕಳ ವರದಿ ಆರ್‍ಎಸ್ ವಿ ವೈರಸ್ ಎಂದು ಪತ್ತೆಯಾಗಿದೆ. ಅದೊಂದು ಸಾಮಾನ್ಯ ರೋಗ ಲಕ್ಷಣವಾಗಿದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.










