ಜಾನಪದ ಭಾರತೀಯ ಸಂಸ್ಕೃತಿಗೆ ತಳಪಾಯ : ಶಾಸಕ ಬೆಳ್ಳಿಪ್ರಕಾಶ್.

71
firstsuddi

ಚಿಕ್ಕಮಗಳೂರು : ಭಾರತೀಯ ಸಂಸ್ಕೃತಿಗೆ ಜಗತ್ತಿನಾದ್ಯಂತ ಗೌರವ ಮತ್ತು ಮನ್ನಣೆ ದೊರೆಯುತ್ತಿರುವುದಕ್ಕೆ ಮೂಲ ಕಾರಣ ಅದರಲ್ಲಿ ಅಡಕವಾಗಿರುವ ಜಾನಪದ ಎಂದು ಕಡೂರು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.

ಕಡೂರು ತಾಲ್ಲೂಕಿನ ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ ಇಂದು ಆಯೋಜಿಸಿದ್ದ ತಾಲ್ಲೂಕು ಪ್ರಥಮ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ನಮ್ಮ ಸಂಸ್ಕೃತಿಯ ಮೂಲಬೇರು, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಭಾರತೀಯ ಸಂಸ್ಕೃತಿಗೆ ತಳಪಾಯವಾಗಿದೆ ಅದರಿಂದಾಗಿ ನಮ್ಮ ಸಂಸ್ಕೃತಿ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಸಂಸ್ಕೃತಿಯಾಗಿ ಮನ್ನಣೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಆಧುನಿಕತೆಯ ಆಡಂಬರಕ್ಕೆ ಸಿಲುಕಿ ಕಣ್ಮರೆಯಾಗುತ್ತಿರುವ ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದರು.

ಆಶಯ ನುಡಿಗಳನ್ನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ತಿಂಗಳೂ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿಗಳಲ್ಲಿ ಜಾನಪದ ತರಬೇತಿ ಕಾರ್ಯಾಗಾರ, ಜಾನಪದ ಗೋಷ್ಠಿ, ವಿಚಾರ ಸಂಕಿರಣ ಮತ್ತು ಸಮ್ಮೇಳನಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷ ಸಾಹಿತಿ ಚಟ್ನಹಳ್ಳಿ ಮಹೇಶ್ ಮಾತನಾಡಿ ಭಾರತೀಯ ಸಂಸ್ಕೃತಿಯ ತಾಯಿಬೇರಾಗಿರುವ ಜಾನಪದ ಗ್ರಾಮೀಣ ಜನರಿಂದಾಗಿ ಆಧುನಿಕತೆಯ ಅಬ್ಬರದ ನಡುವೆಯೂ ಇಂದಿಗೂ ಜೀವಂತವಾಗಿದೆ ಎಂದು ಹೇಳಿದರು.

ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಗ್ರಾಮೀಣರಿಗೆ ಬದುಕನ್ನು ಕಟ್ಟಿಕೊಟ್ಟಿವೆ, ಅವರ ಕೌಟುಂಬಿಕ ವ್ಯವಸ್ಥೆ ಮತ್ತು ಸಂಬಂಧಗಳನ್ನು ಭದ್ರಗೊಳಿಸಿವೆ. ಹಳ್ಳಿ ಜನರ ಬದುಕಿನಲ್ಲಿ ಜಾನಪದ ಹಾಸುಹೊಕ್ಕಾಗಿರುವುದರಿಂದಾಗಿ ಅವರ ಬದುಕು, ವಿಚಾರ, ನಡೆ, ನುಡಿ ಯಾವುದೇ ಆಡಂಬರವಿಲ್ಲದೆ ನೈಜತೆಯಿಂದ ಕೂಡಿದೆ ಎಂದು ತಿಳಿಸಿದರು.

ಸಾಹಿತಿ ನಾಗಶ್ರೀ ತ್ಯಾಗರಾಜ್ ಜಾನಪದ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದರು.ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಜಗದೀಶ್ವರಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮ್ಮೇಳನಕ್ಕೆ ಮುನ್ನ ಡೊಳ್ಳುಕುಣಿತ, ವೀರಗಾಸೆ, ಪೂಜಾಕುಣಿತ, ಚೋಮನಕುಣಿತ, ಚಿಟ್ಟಿಮೇಳ, ಕೋಲಾಟ, ಭಜನಾ ತಂಡಗಳು, ಗೊರವ ಕುಣಿತ, ಕರಡಿ ಮೇಳಗಳು ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ನಡುವೆ ಸಮ್ಮೇಳನಾಧ್ಯಕ್ಷರನ್ನು ಎತ್ತಿನ ಗಾಡಿಯಲ್ಲಿ ಸಮ್ಮೇಳನದ ಮಂಟಪಕ್ಕೆ ಕರೆತರಲಾಯಿತು.

ಸಮ್ಮೇಳನಾಧ್ಯಕ್ಷ ಸಾಹಿತಿ ಚಟ್ನಹಳ್ಳಿ ಮಹೇಶ್ ರಾಷ್ಟ್ರಧ್ವಜ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ನಾಡಧ್ವಜ, ತಾಲ್ಲೂಕು ಅಧ್ಯಕ್ಷ ಜಗದೀಶ್ವರಾಚಾರ್ ಜಾನಪದ ಧ್ವಜರೋಹಣ ನೆರವೇರಿಸಿದರು.

ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಲೋಕೇಶ್, ದೇವಾನಂದ್, ಜಿ.ಬಿ.ವಿರೂಪಾಕ್ಷ, ಪಿ.ಎಂ.ಪ್ರಸನ್ನ ಕುಮಾರ್, ಎ.ಸಿ.ಚಂದ್ರಪ್ಪ, ತಿಪ್ಪೇಶ್, ಹಾಲೇಶ್, ದೇವರಾಜ್, ರವಿ ಚಟ್ನಹಳ್ಳಿ, ಪರಮೇಶ್ವರಪ್ಪ ಉಪಸ್ಥಿತರಿದ್ದರು.