ಜೂ.19 ರಿಂದ 21ರವರೆಗೆ ಮೈಸೂರು ಅರಮನೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ…

64
firstsuddi

ಮೈಸೂರು : ಜೂ.21 ರಂದು ಮೈಸೂರು ಅರಮನೆ ಆವರಣದಲ್ಲಿ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಿರುವ ಹಿನ್ನೆಲೆಯಲ್ಲಿ, ಪೂರ್ವಭಾವಿ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ಜೂ.19ರಿಂದ ಜೂ.21ರ ಮಧ್ಯಾಹ್ನ 12ರವರೆಗೆ ಅರಮನೆಯ ಪ್ರವೇಶವನ್ನು ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಜೊತೆಗೆ ಅರಮನೆ ಆವರಣದಲ್ಲಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನೂ ಜೂ.18 ರಿಂದ ಜೂನ್ 22ರವರೆಗೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ತಿಳಿಸಿದೆ.

8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಅರಮನೆ ಆವರಣದಲ್ಲಿ ನಡೆಯಲಿರುವ ಬೃಹತ್ ಯೋಗ ಪ್ರದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪಾಲ್ಗೊಳ್ಳಲು ಮೈಸೂರು ರಾಜವಂಶಸ್ಥರಿಗೆ ಆಹ್ವಾನ ನೀಡಲಾಗಿದೆ.

ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯೋಗ ವೇದಿಕೆಯಲ್ಲಿ ಪಾಲ್ಗೊಳ್ಳಲು ಸಿದ್ಧಪಡಿಸಿದ್ದ ಗಣ್ಯರ ಪಟ್ಟಿಯಲ್ಲಿ ರಾಜವಂಶಸ್ಥ ಯದುವೀರ್ ಅವರ ಹೆಸರನ್ನು ಕೈಬಿಡಲಾಗಿತ್ತು. ಇದರಿಂದ ರಾಜವಂಶಸ್ಥರಿಗೆ ಆಹ್ವಾನವಿಲ್ಲವೆಂಬ ಅಭಿಯಾನ ಶುರುವಾಗಿತ್ತು. ಇದೀಗ ಎಚ್ಚೆತ್ತ ಜಿಲ್ಲಾಡಳಿತ ಗಣ್ಯರ ಪಟ್ಟಿಯಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರನ್ನು ಸೇರಿಸಲಾಗಿದೆ. ಮುಖ್ಯಮಂತ್ರಿ, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ, ಕೇಂದ್ರ ಆಯುಷ್ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೂ ವೇದಿಕೆಯ ಯೋಗಾಭ್ಯಾಸದಲ್ಲಿ ಭಾಗಿಯಾಗಲಿದ್ದಾರೆ.

ಯೋಗಾಭ್ಯಾಸದ ನಂತರ ಮೈಸೂರು ಅರಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಇರಲಿದೆ. ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಆಹ್ವಾನದ ಮೇರೆಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಇದೆ. ಸುಮಾರು ಒಂದು ಗಂಟೆಗಳ ಕಾಲ ಅರಮನೆಯಲ್ಲಿ ರಾಜವಂಶಸ್ಥರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ ಅಂತ ಮೂಲಗಳು ತಿಳಿಸಿವೆ.