ಬೆಂಗಳೂರು: ಚೀನಾದಲ್ಲಿ ಹೊಸ ಹೆಚ್ಎಂಪಿವಿ ವೈರಸ್ ಅಬ್ಬರಿಸಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಚೀನಾದಲ್ಲಿ ಕಾಣಿಸಿಕೊಂಡಿರುವ ಹ್ಯೂಮನ್ ಮೆಟಾ ಫ್ನ್ಯೊಮೋ ವೈರಸ್ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿರುವ ಜೊತೆಗೆ ರಾಜ್ಯ ಆರೋಗ್ಯ ಇಲಾಖೆ ವೈರಸ್ ನಿಯಂತ್ರಿಸಲು ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನತೆ ಬಳಿ ಮನವಿ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲದ ಕಾರಣ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಆಗಾಗ್ಗ್ಯೆ ಕೈಗಳನ್ನೂ ಸಾಬೂನು ಹಾಗೂ ಸ್ಯಾನಿಟೈಸರ್ಗಳಿಂದ ಸ್ವಚ್ಛಗೊಳಿಸುತ್ತಿರಿ. ಕೆಮ್ಮು, ನೆಗಡಿ, ಜ್ವರ ಇರುವವರು ಆದಷ್ಟು ಹೊರಗೆ ಓಡಾಡದೆ ಮನೆಯಲ್ಲೇ ಇದ್ದು, ಚಿಕಿತ್ಸೆ ಪಡೆಯಿರಿ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ತಪ್ಪಿಸಿ ಸ್ವಯಂ ಔಷಧಗಳನ್ನು ಸೇವಿಸದೆ ನೆಗಡಿ, ಕೆಮ್ಮು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯಿರಿ. ಇಂತಹವರು ಬಳಿಸಿದ ಟವಲ್ ಮತ್ತು ಬಟ್ಟೆಗಳನ್ನು ಬೇರೆಯವರು ಬಳಸದಿರಿ. ಮಕ್ಕಳು ಹಾಗೂ ಹಿರಿಯರ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿ ಎಂದು ರಾಜ್ಯ ಸರ್ಕಾರ ಜನತೆ ಬಳಿ ಮನವಿ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಡಿಸೆಂಬರ್ನಲ್ಲಿ ಸಾಮಾನ್ಯ ಶೀತ, ಐಎಲ್ಯ ಮತ್ತು ಸಾರಿ ಪ್ರಕರಣಗಳಲ್ಲಿ ಯಾವುದೇ ಗಮನಾರ್ಹ ಹೆಚ್ಚಳವಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.










