ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5ನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿದೆ. ಈ ಪಂದ್ಯದ 2ನೇ ದಿನ ಟೀಂ ಇಂಡಿಯಾ 145 ರನ್‍ಗಳ ಮುನ್ನಡೆ ಸಾಧಿಸಿದೆ. ಇದರಲ್ಲಿ ರಿಷಭ್ ಪಂತ್ ಕೊಡುಗೆ ಅಪಾರವಾಗಿದ್ದು, 2ನೇ ಇನ್ನಿಂಗ್ಸ್‍ನಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ ಪಂತ್ 29 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದ್ದಾರೆ. ಕೊನೆಯದಾಗಿ ಪಂತ್ 33 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಒಳಗೊಂಡ 61 ರನ್‍ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಈ ಅದ್ಭುತ ಅರ್ಧಶತಕದ ಮೂಲಕ ಪಂತ್ 50 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಅವರು ಆಡಿದ 5 ಪಂದ್ಯಗಳ ಸರಣಿಯಲ್ಲಿ 9 ಇನ್ನಿಂಗ್ಸ್‍ಗಳಲ್ಲಿ 255 ರನ್ ಗಳಿಸುವಲ್ಲಿ ಯಶಸ್ವಿಯಾದರು. ವಾಸ್ತವವಾಗಿ 1975 ರಲ್ಲಿ, ವೆಸ್ಟ್ ಇಂಡೀಸ್‍ನ ರಾ ಫ್ರೆಡೆರಿಕ್ಸ್ ಆಸ್ಟ್ರೇಲಿಯನ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದರು. ಫ್ರೆಡೆರಿಕ್ಸ್ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದೀಗ 29 ಎಸೆತಗಳಲ್ಲಿ ಈ ಸಾಧನೆ ಮಾಡಿರುವ ರಿಷಬ್ ಪಂತ್ ಆಸ್ಟ್ರೇಲಿಯಾ ನೆಲದಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.










