ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ!

83
firstsuddi

ಬೆಂಗಳೂರು : ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿ ಮದುವೆಯಾದ 11 ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್ ನಲ್ಲಿ ನಡೆದಿದೆ. ಶ್ವೇತಾ(27) ಮೃತ ದುರ್ದೈವಿ.

ಐಬಿಎಂ ಕಂಪನಿ ಉದ್ಯೋಗಿಯಾಗಿದ್ದ ಶ್ವೇತಾ, ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ನನ್ನು ಮದುವೆಯಾಗಿದ್ದರು. ಮದುವೆಗೂ ಮುನ್ನ ಯುವತಿಯೊಬ್ಬಳೊಂದಿಗೆ ಅಭಿಷೇಕ್ ಸಂಬಂಧ ಹೊಂದಿದ್ದನಂತೆ. ಮದುವೆಯ ನಂತರ ಈ ವಿಚಾರ ಗೊತ್ತಾಗಿ ದಂಪತಿ ನಡುವೆ ಜಗಳವಾಗಿತ್ತು. ಪರಸ್ಪರ ರಾಜಿ ಪಂಚಾಯತಿ ಬಳಿಕ ಇಬ್ಬರೂ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು.

ಶ್ವೇತಾಳೊಂದಿಗೆ ಮದುವೆ ನಿಶ್ಚಯವಾದ ನಂತರವೂ ಅದೇ ಯುವತಿಯೊಂದಿಗೆ ಟೂರ್ ಹೋಗಿದ್ದ. ಅಷ್ಟೇ ಅಲ್ಲದೇ ಮದುವೆಯ ನಂತರವೂ ಅನೈತಿಕ ಸಂಬಂಧ ಮುಂದುವರಿಸಿದ್ದ. ಈ ವಿಚಾರ ತಿಳಿದು ಶ್ವೇತಾ ಗಲಾಟೆ ಮಾಡಿದ್ದಳು. ಆ ಬಳಿಕ ಪತ್ನಿಯ ಬಳಿ ಕ್ಷಮೆಯಾಚಿಸಿ ಅಕ್ರಮ ಸಂಬಂಧ ಬಿಡುವುದಾಗಿ ಹೇಳಿದ್ದ.

ಆದರೆ ಅಭಿಷೇಕ್ ಪುನಃ ತನ್ನ ಹಳೇ ಚಾಳಿ ಮುಂದುವರೆಸಿದ್ದನಂತೆ. ಇದರಿಂದಾಗಿ ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಶ್ವೇತಾಳ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ಸದ್ಯ ಶ್ವೇತಾ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಅಭಿಷೇಕ್ ನನ್ನು ಬಂಧಿಸಿದ್ದಾರೆ.