ಬೆಂಗಳೂರಿನಲ್ಲಿ ರ‍್ಯಾಪಿಡ್‌ ರಸ್ತೆ ಉದ್ಘಾಟಿಸಿದ ಸಿಎಂ.

48
firstsuddi

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಿಬಿಎಂಪಿ ವತಿಯಿಂದ ಸಿ.ವಿ.ರಾಮನ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿರುವ ರ‍್ಯಾಪಿಡ್‌ ರಸ್ತೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ, ವೈಟ್ ಟಾಪಿಂಗ್ ಯೋಜನೆಗೆ ಹೋಲಿಸಿದರೆ ಇದರಲ್ಲಿ ವೇಗವಾಗಿ ಕೆಲಸವಾಗಲಿದೆ. ಪ್ರಾಯೋಗಿಕವಾಗಿ ಅನುಷ್ಠಾನಗೊಂಡಿರುವ ಯೋಜನೆಯನ್ನು 15 ದಿನಗಳ ಕಾಲ ಪರಿಶೀಲಿಸಲಾಗುತ್ತದೆ ಎಂದರು.

ಸುಮಾರು 20 ಟನ್ ಭಾರವುಳ್ಳ ವಾಹನಗಳು ಈ ರಸ್ತೆ ಮೇಲೆ ಸಂಚರಿಸಬಹುದು. ಪ್ರಿ ಕಾಸ್ಟ್ ತಂತ್ರಜ್ಞಾನ ಬಳಸಿ ಈ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ವೈಟ್ ಟಾಪಿಂಗ್ ಗೆ ಹೋಲಿಸಿದರೆ ವೆಚ್ಚ ಹೆಚ್ಚಾಗಿದ್ದು, ವೆಚ್ಚ ಕಡಿಮೆ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈ ಬಗ್ಗೆ ವರದಿ ಸಲ್ಲಿಸಲು ನಿರ್ದೇಶಿಸಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ರಸ್ತೆ ನಿರ್ಮಾಣ ಮಾಡುವ ಸಂದರ್ಭಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ವೈಟ್ ಟಾಪಿಂಗ್ ಬಹಳ ಸಮಯ ತೆಗೆದುಕೊಳ್ಳುತ್ತದೆ. ಒಂದು ಬಾರಿ ವೈಟ್ ಟಾಪಿಂಗ್ ಆದ ನಂತರ ಸಮಸ್ಯೆ ಉಂಟಾದಲ್ಲಿ ಮತ್ತೆ ಅದನ್ನು ಒಡೆದು ತೆಗೆಯುವುದು ದೊಡ್ಡ ಆತಂಕದ ಕೆಲಸ. ಹೀಗಾಗಿ ರ‍್ಯಾಪಿಡ್‌ ತಂತ್ರಜ್ಞಾನ ಬಂದಿದೆ. ಭಾರಿ ವಾಹನಗಳ ಸಂಚಾರದಿಂದ ಆಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ವರದಿ ಕೇಳಲಾಗಿದೆ ಎಂದು ತಿಳಿಸಿದರು.

ರಸ್ತೆ ಗುಣಮಟ್ಟವಿರಬೇಕು ಹಾಗೂ ವೆಚ್ಚವೂ ಸೂಕ್ತವಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಆಗುವುದಾದರೆ ಬೆಂಗಳೂರಿನ ಇತರ ಸಂಚಾರ ದಟ್ಟಣೆಯುಳ್ಳ, ಕ್ಷಿಪ್ರವಾಗಿ ರಸ್ತೆಯಾಗಬೇಕಿರುವ ಸ್ಥಳಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.