ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ- ಇಬ್ಬರು ಸಜೀವ ದಹನ…

68
firstsuddi

ಬೆಳಗಾವಿ: ಟಿಪ್ಪರ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸಜೀವ ದಹನವಾಗಿರುವ ಘಟನೆ ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ ನಡೆದಿದೆ.

ಮೃತರನ್ನು ಬಂಬರಗಾ ಗ್ರಾಮದ ಮೋಹನ್ ಮಾರುತಿ ಬೆಳ್ಗಾಂವಕರ್(24) ಹಾಗೂ ಮಚ್ಚೆ ಗ್ರಾಮದ ಬಾಲಕಿ ಸಮಿಕ್ಷಾ ಡಿಯೇಕರ್(12) ಎಂದು ಗುರುತಿಸಲಾಗಿದೆ.

ಸಂಬಂಧಿಕರ ಮದುವೆ ಮುಗಿಸಿಕೊಂಡು ವಾಪಸ್ಸಾಗುವಾಗ ಬಂಬರಗಾ ಕ್ರಾಸ್ ಬಳಿ ಅಡ್ಡ ಬಂದ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಟಿಪ್ಪರ್ ನ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರ ಪೈಕಿ ಸಮಿಕ್ಷಾ ಮತ್ತು ಮೋಹನ್ ಮಾರುತಿ ಸಜೀವ ದಹನವಾಗಿದ್ದು, ಇನ್ನುಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಾದ ಮಹೇಶ್ ಬೆಳ್ಗಾಂವಕರ್ ಮತ್ತು ಸ್ನೇಹಾ ಬೆಳ್ಗುಂದ್ಕರ್ ಎನ್ನುವರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ಪೊಲೀಸರು ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಇನ್ನು ಸ್ಥಳಕ್ಕೆ ಡಿಸಿಪಿ ಸ್ನೇಹಾ, ಎಸಿಪಿ ಮತ್ತು ಕಾಕತಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಇಬ್ಬರ ಶವವನ್ನ ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಅಪಘಾತವಾಗುತ್ತಿದ್ದಂತೆಯೇ ಟಿಪ್ಪರ್ ಚಾಲಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.