ಬೆಂಗಳೂರು: ಬೇರೊಬ್ಬನ ಜೊತೆ ಅನೈತಿಕ ಸಂಬಂಧದ ಅನುಮಾನದ ಮೇಲೆ ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ನಗರದ ಜೀವನ್ ಭೀಮಾ ನಗರದ ವಿಂಡ್ ಟನಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಶೇಕ್ ಮುಜೀಬ್ ಎನ್ನುವಾತ ನೈಗರ್ (28) ಎನ್ನುವಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಹೊಸಕೋಟೆ ಮೂಲದ ಮುಜೀಬ್, ಕ್ಯಾಬ್ ಡ್ರೈವರ್ ಕೆಲಸ ಮಾಡಿಕೊಂಡು ಆರ್ ಟಿ ನಗರದಲ್ಲಿ ವಾಸವಿದ್ದ. ನೈಗರ್ ಪ್ರೈವೆಟ್ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು.
ಇತ್ತೀಚೆಗೆ ಹೆಂಡತಿ ನಡತೆ ಮೇಲೆ ಸಂಶಯ ಹೊಂದಿದ್ದ ಶೇಖ್ ಮುಜೀಬ್, ಹೆಂಡತಿಯಿಂದ ದೂರಾಗಿದ್ದನು. ಇತ್ತ ಪತ್ನಿಯು ಸಲೀಂ ಅನ್ನೋನ ಜೊತೆ ಸುತ್ತಾಡ್ತಿದ್ದಾಳೆ ಅನ್ನೋ ವಿಚಾರ ಮುಜೀಬ್ ಗಮನಕ್ಕೆ ಬಂದಿದೆ. ಹೀಗಾಗಿ ನಿನ್ನೆ ಶಿವಾಜಿನಗರಕ್ಕೆ ಹೋಗಿ ಮೀನು ಕತ್ತರಿಸುವ ಮಚ್ಚು ಖರೀದಿ ಮಾಡಿ ಪತ್ನಿ ಪಿಜಿಗೆ ವಾಪಸ್ಸಾಗುವ ರಸ್ತೆಯಲ್ಲಿ ಹೊಂಚು ಹಾಕಿ ಕುಳಿತಿದ್ದ. ಅಂತೆಯೇ ಸಂಜೆ 7 ಗಂಟೆಗೆ ಬಾಯ್ ಫ್ರೆಂಡ್ ಸಲೀಂ ಜೊತೆ ಬಂದ ಹೆಂಡ್ತಿ ನೋಡಿ ಆಕೆಯ ಕೈ ಬೆರಳುಗಳನ್ನ ಟಾರ್ಗೆಟ್ ಮಾಡಿ ಮಚ್ಚಿಂದ ಹಲ್ಲೆ ಮಾಡಿದ್ದ. ಈ ವೇಳೆ ಪತ್ನಿ ತಲೆ ಮೇಲೆ ಕೈ ಇಟ್ಕೊಂಡಿದ್ದರಿಂದ ಕೈ ಜೊತೆಗೆ ತಲೆಗೂ ಗಂಭೀರ ಗಾಯವಾಗಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಘಟನಾ ಸ್ಥಳಕ್ಕೆ ಜೆ.ಬಿ ನಗರ ಪೊಲೀಸರು ಆಗಮಿಸಿ ಆರೋಪಿ ಶೇಖ್ ಮುಜಿಬ್ನನ್ನು ಬಂಧಿಸಿದ್ದಾರೆ. ಮುಜಿಬ್ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 ರಡಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿಚಾರಣೆ ನಡೆಸಲಾಗ್ತಿದೆ.










