ಮಗಳಿಗೆ ನೇಣುಬಿಗಿದು ಅದೇ ಹಗ್ಗಕ್ಕೆ ಕೊರಳೊಡ್ಡಿದ ತಾಯಿ…

40
firstsuddi

ಬೆಳಗಾವಿ: ಮಹಿಳೆಯೊಬ್ಬಳು ತನ್ನ ಮಗಳಿಗೆ ನೇಣುಬಿಗಿದು ಕೊಂದ ನಂತರ ಅದೇ ಹಗ್ಗದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ ನಡೆದಿದೆ.

ಮಹಾದೇವಿ ಇಂಚಲ(34) ಚಾಂದನಿ(7) ಆತ್ಮಹತ್ಯೆಗೆ ಶರಣಾದವರು. ಮಹಾದೇವಿ ಇಂಚಲ ಅವರಿಗೆ ಗೋಕಾಕ್ ತಾಲೂಕು ಖನಗಾಂವ ಗ್ರಾಮದ ಯೋಧರೊಬ್ಬರ ಜೊತೆ ವಿವಾಹ ಆಗಿತ್ತು. ಏಳು ವರ್ಷಗಳ ಹಿಂದೆ ಪತಿಯ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಮಹಾದೇವಿಯವರು ಪುತ್ರಿಯೊಂದಿಗೆ ದಿಂಡಲಕೊಪ್ಪದಲ್ಲಿರುವ ತನ್ನ ತವರು ಮನೆಯಲ್ಲಿ ವಾಸವಿದ್ದರು.

ಆರಂಭದಲ್ಲಿ ಹೊಂದಾಣಿಕೆಯಿಂದಲೇ ಸಹೋದರ ಮತ್ತು ನಾದಿನಿಯ ಜೊತೆಗೆ ಜೀವನ ಸಾಗುತ್ತಿತ್ತು. ಕಾಲ ಕಳೆಯುತ್ತಿದ್ದಂತೆ ಮಹಾದೇವಿ ಇಂಚಲ ಅವರಿಗೆ ಸಹೋದರ ಮತ್ತು ನಾದಿನಿ ಕಿರುಕುಳ ನೀಡಲು ಆರಂಭಿಸಿದ್ದಾರೆ. ನಿರಂತರ ಕಿರುಕುಳಕ್ಕೆ ಬೇಸತ್ತ ಮಹಾದೇವಿ ತನ್ನ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ಸಂಬಂಧ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.