ಮರಾಠಿ ಭಾಷೆಯಲ್ಲಿ ಮಾಹಿತಿ ನೀಡಲು ಸೂಚಿಸಿದ ಶಾಸಕಿ ವಿರುದ್ಧ ಕನ್ನಡಿಗರ ಆಕ್ರೋಶ…

88
firstsuddi

ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಗ್ರಾಮ ಒನ್ ಕೇಂದ್ರದ ಉದ್ಘಾಟನೆ ವೇಳೆ ಶಾಸಕಿ ಅಂಜಲಿ ನಿಂಬಾಳ್ಕರ್ ಮರಾಠಿ ಭಾಷೆಯಲ್ಲಿ ಮಾಹಿತಿ ನೀಡಲು ಸೂಚನೆ ನೀಡಿರುವ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಅಂಜಲಿ ನಿಂಬಾಳ್ಕರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಡಿಯೋ ಟ್ವೀಟ್ ನಲ್ಲಿ ಶಾಸಕಿ ಖಾನಾಪುರ ತಾಲೂಕಿನಲ್ಲಿ ಕನ್ನಡ ಬಾರದ ಜನರಿಗೆ ಮರಾಠಿಯಲ್ಲಿ ಮಾಹಿತಿ ನೀಡಿ. ಖಾನಾಪುರ ತಾಲೂಕಿನಲ್ಲಿ ಮರಾಠಿ, ಕನ್ನಡ ಎರಡು ಭಾಷೆಯ ಜನರಿದ್ದಾರೆ. ಸಾಕಷ್ಟು ಜನರಿಗೆ ಕನ್ನಡ ಭಾಷೆ ತಿಳಿಯಲ್ಲ, ಅರ್ಥ ಆಗಲ್ಲ. ಅವರು ಈಗ ಕನ್ನಡ ಅಭ್ಯಾಸ ಮಾಡ್ತಿದ್ದಾರೆ, ಕಲಿಯಲು ಸಹ ಮುಂದೆ ಬಂದಿದ್ದಾರೆ. ನಾವು ಜನ ಸೇವೆ ಮಾಡುತ್ತಿದ್ದು, ಜನರಿಗೆ ತಿಳಿಯುವ ಭಾಷೆಯಲ್ಲಿ ಹೇಳಬೇಕು. ಅದಕ್ಕೆ ಕನ್ನಡ ಭಾಷೆ ಜೊತೆ ಮರಾಠಿ ಭಾಷೆಗಳ ಫಲಕ ಹಾಕಿ ಅಂತಾ ಒತ್ತಾಯಿಸುವೆ ಎಂದಿದ್ದಾರೆ.

ಶಾಸಕಿ ಅಂಜಲಿ ನಿಂಬಾಳ್ಕರ್ ವಿಡಿಯೋ ಟ್ವೀಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಾಸಕಿಯನ್ನು ತರಾಟೆಗೆ ತೆಗೆದುಕೊಂಡಿರುವ ಕನ್ನಡಿಗರು ಕಳೆದ 60 ವರ್ಷಗಳಿಂದ ಕರ್ನಾಟಕದಲ್ಲಿದ್ದು, ಕನ್ನಡ ಕಲಿಯದಿರುವುದು ಯಾರ ತಪ್ಪು?. ಮಹಾರಾಷ್ಟ್ರದಲ್ಲಿರುವ ಕನ್ನಡ ಪ್ರದೇಶಗಳಲ್ಲಿ ಮಹಾರಾಷ್ಟ್ರ ಸರ್ಕಾರ ಕನ್ನಡದಲ್ಲಿ ಸೇವೆ ನೀಡುತ್ತಿದೆಯೇ, ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳ ಮೇಲೆ ಯಾವ ರೀತಿ ದರ್ಪ ತೋರುತ್ತಿದ್ದಾರೆ ನಿಮಗೆ ಗೊತ್ತಾ ಎಂದು ಪ್ರಶ್ನಿಸಿದ್ದಾರೆ.