ಮರಿಯಮ್ಮನಹಳ್ಳಿ : ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಾದ್ಯಂತ ಭಾರಿ ಮಳೆ- ಜನಜೀವನ ಅಸ್ತವ್ಯಸ್ತ…

150
firstsuddi

ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ

ಮರಿಯಮ್ಮನಹಳ್ಳಿ : ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಾದ್ಯಂತ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಪಟ್ಟಣದಲ್ಲಿ 46.5 ಮಿ.ಮಿ ಮಳೆಯಾದ ಕುರಿತು ವರದಿಯಾಗಿದೆ.
ನಿನ್ನೆ ರಾತ್ರಿ ಸುಮಾರು 8 ಗಂಟೆಯಿಂದ ಪ್ರಾರಂಭವಾದ ಮಳೆ ತಡರಾತ್ರಿಯವರೆಗೂ ಮುಂದುವರೆದಿತ್ತು. ಗುಡುಗು ಮಿಶ್ರಿತ ಮಿಂಚಿನಿಂದ ಸುಮಾರು ಒಂದೂವರೆ ತಾಸು ಭಾರಿ ಮಳೆಯಾಗಿದೆ. ನಂತರ ಪುನಃ ಮತ್ತೆ ಹಿಡಿದ ಜಿಟಿಮಳೆಯು ತಡರಾತ್ರಿಯಿಂದ ಮುಂಜಾವಿನವರೆಗೂ ಸುರಿದ ಜಿಟಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ನಿನ್ನೆ ಹೊಸಪೇಟೆಯಿಂದ ತಮ್ಮ ನಿತ್ಯ ಕಾರ್ಯ ಮುಗಿಸಿಕೊಂಡು ಪಟ್ಟಣಕ್ಕೆ ಮರಳುವ ದ್ವಿಚಕ್ರ ಹಾಗೂ ನಾಲ್ಕುಚಕ್ರ ವಾಹನ ಸವಾರರು ಭಾರಿ ಮಳೆಗೆ ರಸ್ತೆ ಕಾಣದೇ ವಾಹನ ಚಲಾಯಿಸಲೂ ಆಗದೇ ರಾಷ್ಟ್ರೀಯ ಹೆದ್ದಾರಿ 50ರ ಟನಲ್‍ನಲ್ಲಿ ಸುಮಾರು ಒಂದು ಗಂಟೆಗಳವರೆಗೂ ಟನಲ್‍ನಲ್ಲಿ ಆಶ್ರಯ ಪಡೆದು ನಂತರ ಅಲ್ಲಿಂದ ತೆರಳಿದ್ದು ಕಂಡುಬಂತು. ಅಲ್ಲದೇ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಲ್ಲಲ್ಲಿ ಮಳೆ ನೀರು ನಿಂತ ಕಾರಣ ದ್ವಿಚಕ್ರವಾಹನ ಸವಾರರು ರಸ್ತೆಯಲ್ಲಿ ವಾಹನ ಸಂಚರಿಸಲು ಆಗದೇ ರಸ್ತೆಯಲ್ಲಿ ವಾಹನ ಚಲಾಯಿಸಲು ಪರದಾಡಿದರು.