ಬೆಂಗಳೂರು : ಮಲಗಿದ್ದ ಏಳು ವರ್ಷದ ಬಾಲಕಿ ಮೇಲೆ ಟೆಂಪೋ ಹರಿದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ತಮಿಳುನಾಡು ಮೂಲದ ಶಿವನ್ಯ ಮೃತ ಬಾಲಕಿ. ಮೃತ ಬಾಲಕಿ ಕುಟುಂಬ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಗರದ ಹುಸ್ಕೂರು ಜಾತ್ರೆಗೆ ಬಂದಿದ್ದ ಕುಟುಂಬಸ್ಥರು ಊರಿಗೆ ಹಿಂತಿರುಗಲು ಸಿಟಿ ಮಾರ್ಕೆಟ್ ಗೆ ನಿನ್ನೆ ರಾತ್ರಿ ಬಂದಿದ್ದರು. ರಾತ್ರಿ ಬಸ್ ಸಿಗದೆ ತೆಂಗಿನ ಕಾಯಿ ಮಂಡಿ ಬಳಿ ಮಲಗಿದ್ದರು. ಈ ವೇಳೆ, ಬೊಲೋರೋ ಟೆಂಪೋದಲ್ಲಿ ಹೂ ಹಾಕಿಕೊಂಡು ಬಂದಿದ್ದ ಚಾಲಕ, ಅನ್ ಲೋಡ್ ಮಾಡಿ ಹೊರಡಲು ಮುಂದಾಗಿದ್ದ. ಆಗ ರಸ್ತೆ ಬದಿಯಲ್ಲಿ ಮಲಗಿದ್ದನ್ನು ಗಮನಿಸಿದೆ ಟೆಂಪೋ ರಿವರ್ಸ್ ಮಾಡುವಾಗ ಬಾಲಕಿ ಮೇಲೆ ಹತ್ತಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಳು.
ಗಾಯಗೊಂಡ ಬಾಲಕಿಯನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಆಕೆ ಸಾವನ್ನಪ್ಪಿದ್ದಾಳೆ. ಇತ್ತ ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಸಂಬಂಧ ಸಿಟಿ ಮಾರ್ಕೆಟ್ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.










