ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಜೆಡಿಎಸ್‌ನ ಇಬ್ಬರು ಶಾಸಕರಿಗೆ ನೋಟಿಸ್…

57
firstsuddi

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್‌ನ ಇಬ್ಬರು ಶಾಸಕರಿಗೆ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ನೋಟಿಸ್ ಜಾರಿ ಮಾಡಿದ್ದಾರೆ.

ಕೋಲಾರ ಶಾಸಕ ಶ್ರೀನಿವಾಸಗೌಡ ಹಾಗೂ ಗುಬ್ಬಿ ಶಾಸಕ ಶ್ರೀನಿವಾಸ್ ಗೆ ನೋಟಿಸ್ ಜಾರಿ ಮಾಡಿದ್ದು, ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ. ಇಬ್ಬರು ಶಾಸಕರನ್ನ ಅನರ್ಹ ಮಾಡುವಂತೆ ಜೆಡಿಎಸ್ ಪಕ್ಷದಿಂದ ದೂರು ಬಂದ ಹಿನ್ನೆಲೆಯಲ್ಲಿ ವಿಶಾಲಾಕ್ಷಿ ಅವರು ನೋಟಿಸ್ ಜಾರಿ ಮಾಡಿದ್ದಾರೆ.

ರಾಜ್ಯಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಲೇಹರ್ ಸಿಂಗ್ ಪರ ಮತದಾನ ಮಾಡಿದ್ದಾರೆ ಎಂದು ಗುಬ್ಬಿ ಶ್ರೀನಿವಾಸ್ ವಿರುದ್ಧ ಆರೋಪಿಸಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಕೋಲಾರ ಶ್ರೀನಿವಾಸಗೌಡ ಬಹಿರಂಗವಾಗಿ ಹೇಳಿದ್ದರು. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ನಿಯಮದಡಿ ಇಬ್ಬರು ಶಾಸಕರ ಸದಸ್ಯತ್ವ ಅನರ್ಹತೆಗೆ ಜೆಡಿಎಸ್ ಶಾಸಕ ವೆಂಕಟ್ರಾವ್ ನಾಡಗೌಡ ದೂರು ನೀಡಿದ್ದರು. ದೂರನ್ನ ಪರಿಶೀಲಿಸಿದ ವಿಧಾನಸಭೆ ಸಭಾಧ್ಯಕ್ಷರ ಅರೆ ನ್ಯಾಯಿಕ ಪ್ರಾಧಿಕಾರ, ಕಾರಣ ಕೇಳಿ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಕೆಲ ತಿಂಗಳ ಹಿಂದೆ ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸಗೌಡ ಉಚ್ಚಾಟನೆ ಮಾಡಿ ಜೆಡಿಎಸ್ ಆದೇಶ ಹೊರಡಿಸಿತ್ತು.