ಚಿಕ್ಕಮಗಳೂರು : ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಹಸಿರಿನ ಮಹತ್ವ ಕುರಿತು ಜನಜಾಗೃತಿ ಮೂಡಿಸುವ ಮೂಲಕ ವಿಶ್ವ ಪರಿಸರ ದಿನವನ್ನು ಇಂದು ಅರ್ಥಪೂರ್ಣವಾಗಿ ಆಚರಿಸಿದರು.
ತಾಲ್ಲೂಕು ಕಚೇರಿ ಆವರಣದಿಂದ ಬೆಳಿಗ್ಗೆ ಮ್ಯಾರಥಾನ್ ನಡಿಗೆಯೊಂದಿಗೆ ಹಸಿರು ಬೆಳೆಸಿ ಭೂಮಿ ಉಳಿಸಿ ಘೋಷಣೆ ಕೂಗುತ್ತಾ ಹೊರಟ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಶಿಕ್ಷಕರು ಮತ್ತು ಸಿಬ್ಬಂದಿಗಳು ಆಜಾದ್ ಪಾರ್ಕ್ ವೃತ್ತದ ಬಳಿ ಹಸಿರು ಗೀತೆ ಮತ್ತು ಪರಿಸರ ಗೀತೆ ಗಾಯನ ಮಾಡಿದರು.
ಹಸಿರನ್ನು ಉಳಿಸಿ ಬೆಳೆಸುವ ಕುರಿತು ವಿದ್ಯಾರ್ಥಿಗಳು ಪ್ರತಿಜ್ಞೆ ಕೈಗೊಂಡರು. ಇದೇ ವೇಳೆ ವಿದ್ಯಾರ್ಥಿಗಳಿಂದ ನಡೆದ ಬೀದಿ ನಾಟಕ ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.
ಹಸಿರನ್ನು ಉಳಿಸಿ ಬೆಳೆಸುವ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದ ಶಾಲೆಯ ಕಾರ್ಯದರ್ಶಿ ಕೆ.ಸಿ.ಶಂಕರ್ ನಾವು ಈಗಿನಿಂದಲೇ ಪರಿಸರವನ್ನು ಉಳಿಸಲು ಮುಂದಾಗದಿದ್ದಲ್ಲಿ ಮುಂದಿನ ಪೀಳಿಗೆಯ ಬದುಕು ದುಸ್ಥರವಾಗಲಿದೆ ಎಂದು ಎಚ್ಚರಿಸಿದರು.
ಹಸಿರು ಮತ್ತು ಸುಂದರ ಪರಿಸರಕ್ಕಾಗಿ ಪ್ರತಿಯೊಬ್ಬರೂ ತಪ್ಪದೇ ಗಿಡ ಮರಗಳನ್ನು ನೆಟ್ಟು ಬೆಳೆಸಬೇಕು ಎಂದು ಸಲಹೆ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿಕುಮಾರ್ ಮ್ಯಾರಥಾನ್ ನಡಿಗೆಗೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಕುವೆಂಪು ವಿದ್ಯಾನಿಕೇತನದ ಟ್ರಸ್ಟಿ ಅರ್ಚನಾ ಶಂಕರ್, ಪ್ರಾಂಶುಪಾಲ ರಾಘವೇಂದ್ರ, ಮುಖ್ಯ ಶಿಕ್ಷಕರಾದ ಹೊನ್ನಾಂಭಿಕ, ಅಕ್ಷತಾ ಹಾಜರಿದ್ದರು.










