ತಿರುವನಂತಪುರ: ಈ ವರ್ಷದ ಮಂಡಲ ಪೂಜಾ ಉತ್ಸವಕ್ಕಾಗಿ ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಇಂದಿನಿಂದ ತೆರೆಯಲಾಗಿದೆ.
ಇಂದು ಸಂಜೆ ಶಬರಿಮಲೆಯ ನೂತನ ಮುಖ್ಯ ಅರ್ಚಕ ವಿ ಕೆ ಜಯರಾಜ್ ಪೊಟ್ಟಿ ಮತ್ತು ಮಲಿಕಾಪ್ಪುರಂ ಮುಖ್ಯ ಅರ್ಚಕ ಎಂ ಎನ್ ರಾಜಿಕುಮಾರ್ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಸಾಂಪ್ರದಾಯಿಕ ಪೂಜೆಗಳು ನೆರವೇರಿದ ಬಳಿಕ ಸ್ಥಳೀಯ ದೇವಸ್ಥಾನದ ಸಿಬ್ಬಂದಿ ದರ್ಶನ ಪಡೆಯಲಿದ್ದಾರೆ. ಯಾತ್ರಿಕರಿಗೆ ನಾಳೆಯಿಂದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ನಾಳೆ ಸೋಮವಾರ ವೃಶ್ಚಿಕದ ಮೊದಲ ದಿನ ನೂತನ ಮುಖ್ಯ ಅರ್ಚಕ ದೇವಸ್ಥಾನದಲ್ಲಿ ಸಾಂಪ್ರದಾಯಗಳನ್ನು ನೆರವೇರಿಸಲಿದ್ದಾರೆ. ಕೋವಿಡ್-19 ನಿಯಮಗಳು ಜಾರಿಯಲ್ಲಿರುವುದರಿಂದ ದಿನಕ್ಕೆ ಸಾವಿರ ಭಕ್ತರಿಗೆ ಮಾತ್ರ ಒಳಗೆ ಹೋಗಲು ಅವಕಾಶವಿರುತ್ತದೆ.
ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಭಕ್ತಾದಿಗಳನ್ನು ದೇವಸ್ಥಾನದ ಒಳಗೆ ಹೋಗಲು ಅವಕಾಶ ಮಾಡಿಕೊಡಲಾಗುವುದು. ಹೈಕೋರ್ಟ್ ಆದೇಶದ ಪ್ರಕಾರ, 750 ಯಾತ್ರಿಕರಿಗೆ ನಿಲಕ್ಕಲ್ ನಲ್ಲಿ ಕಡಿಮೆ ದಿನಗಳ ಮಟ್ಟಿಗೆ ಉಳಿದುಕೊಳ್ಳಲು ಸೌಕರ್ಯವಿದೆ. ಆದರೆ ಪಂಪಾ ಮತ್ತು ಸನ್ನಿದಾನದಲ್ಲಿ ಭಕ್ತರಿಗೆ ಉಳಿದುಕೊಳ್ಳಲು ಅವಕಾಶವಿಲ್ಲ ಎಂದು ಕೇರಳ ಮುಜರಾಯಿ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ.
ಅವರ ನೇತೃತ್ವದಲ್ಲಿ ಕಳೆದ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವರ್ಚುವಲ್ ಸರದಿ ದಾಖಲಾತಿ ಪ್ರಕಾರ ಭಕ್ತರಿಗೆ ದರ್ಶನಕ್ಕೆ ದೇವಸ್ಥಾನದೊಳಗೆ ಬಿಡಲಾಗುತ್ತದೆ.










