ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ್ದ ಯುವಕ ಅರೆಸ್ಟ್…

59
firstsuddi

ವಿಜಯನಗರ : ವಿಶ್ವಪ್ರಸಿದ್ಧ ಹಂಪಿಯ ಜೈನ್ ದೇವಾಲಯದ ಸ್ಮಾರಕದ ಮೇಲೆ ನೃತ್ಯ ಮಾಡಿ, ಅದರ ವಿಡಿಯೋ ಅನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಾಳೇನಹಳ್ಳಿಯ ದೀಪಕಗೌಡ ಬಂಧಿತ ಆರೋಪಿ. ಇತ್ತೀಚೆಗೆ ದೀಪಕಗೌಡ ಹಂಪಿಗೆ ಬಂದಿದ್ದ ವೇಳೆ ಹಂಪಿಯ ಜೈನ್ ದೇವಾಲಯದ ಮೇಲೆ ಹಾಗೂ ಅದರ ಸುತ್ತಮುತ್ತಲಿನ ಪರಿಸರದಲ್ಲಿ ವಿಡಿಯೋ ಚಿತ್ರೀಕರಿಸಿ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ. ಈ ಸಂಬಂಧ ಫೆ.28ರಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಎಂ.ಸಿ. ಸುನೀಲ್‌ಕುಮಾರ್ ಅವರು ಹಂಪಿ ಪ್ರವಾಸಿ ಠಾಣೆಗೆ ದೂರು ಕೊಟ್ಟಿದ್ದರು. ಆ ದೂರು ಆಧರಿಸಿ ದೀಪಕ್ ಗೌಡನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ತಿಳಿಸಿದ್ದಾರೆ.

ಹಂಪಿಯಲ್ಲಿರುವ ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಕೇಂದ್ರ ಸರ್ಕಾರ ಘೋಷಿಸಿದೆ. ಇಲ್ಲಿಗೆ ಬರುವ ಪ್ರವಾಸಿಗರು ಸ್ಮಾರಕಗಳನ್ನು ಹಾನಿಗೊಳಿಸುವುದು, ವಿರೂಪಗೊಳಿಸಿದರೆ ಎರಡು ವರ್ಷ ಜೈಲು ಶಿಕ್ಷೆ ಇದೆ ಎಂದು ತಿಳಿಸಿದ್ದಾರೆ. ದೀಪಕ್ ಗೌಡ, ಬೇಲೂರು, ಹಳೆಬೀಡು, ಪಟ್ಟದಕಲ್ಲು, ಬಾದಾಮಿ ಸೇರಿದಂತೆ ಇತರೆ ಸ್ಮಾರಕಗಳ ಬಳಿಯೂ ಇದೇ ರೀತಿ ವಿಡಿಯೋ ಚಿತ್ರೀಕರಿಸಿದ್ದ. ಹಂಪಿಯಲ್ಲಿ ನಡೆದ ಘಟನೆ ನಂತರ ಟೀಕೆ ವ್ಯಕ್ತವಾಗಿತ್ತು. ಪೊಲೀಸರಿಗೆ ದೂರು ಸಲ್ಲಿಕೆಯಾಗಿದ್ದ ನಂತರ ಕ್ಷಮೆ ಕೂಡ ಯಾಚಿಸಿದ್ದ.