ಹಿಜಾಬ್ ಪ್ರಕರಣ : ವಿಚಾರಣೆಯನ್ನು ನಾಳೆಗೆ ಮುಂದೂಡಿದ ಹೈಕೋರ್ಟ್.

69
firstsuddi

ಬೆಂಗಳೂರು : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೂರ್ಣ ಪೀಠದಲ್ಲಿ 5ನೇ ದಿನವೂ ಹಿಜಬ್ ಅರ್ಜಿ ವಿಚಾರಣೆ ನಡೆಯಿತು. ಇಂದು ಕೂಡ ಅರ್ಜಿದಾರರ ಪರ ವಕೀಲರೇ ವಾದ ಮಂಡಿಸಿದರು. ಸರ್ಕಾರದ ಪರ ವಕೀಲರು ನಾಳೆ ವಾದ ಮಂಡಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಪೀಠ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಧಾರ್ಮಿಕ ಆಚರಣೆಗಳ ಕುರಿತಂತೆ ಅಂತಾರ್ರಾಷ್ಟ್ರೀಯ ಒಡಂಬಡಿಕೆಗಳನ್ನು ಉಲ್ಲೇಖಿಸಲು ಆರಂಭಿಸಿದರು. ಈ ವೇಳೆ ಪೀಠ, ಅರ್ಜಿದಾರರಿಗೆ ಪ್ರಕರಣದಲ್ಲಿ ಖಾಸಗಿ ಹಿತಾಸಕ್ತಿ ಇಲ್ಲ ಎಂಬುದನ್ನು ಪ್ರಸ್ತುತ ಪಡಿಸುವಂತೆ ಸೂಚಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಕೊತ್ವಾಲ್, ಅರ್ಜಿದಾರರು ಓರ್ವ ಸಾಮಾಜಿಕ. ಕೋವಿಡ್ ಸೇರಿದಂತೆ ಹಲವು ವಿಚಾರಗಳಲ್ಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಇದೆ. ಆದ್ದರಿಂದ ತಮ್ಮ ವಾದವನ್ನು ಆಲಿಸಬೇಕು ಎಂದು ಕೋರಿದರು. ಇದಕ್ಕೆ ಸಮ್ಮತಿಸದ ಪೀಠ, ಪಿಐಎಲ್ ಅರ್ಜಿಯನ್ನು ನಿಯಾಮಾನುಸಾರ ಸಲ್ಲಿಸಿಲ್ಲ ಎಂದು ತಿಳಿಸಿ, ವಜಾಗೊಳಿಸಿತು.

ಹಿಜಾಬ್ ಪ್ರಕರಣದಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿರುವ ವಕೀಲ ಡಾ. ವಿನೋದ್ ಕುಲಕರ್ಣಿ ಹಿಜಾಬ್ ನಿರ್ಬಂಧದಿಂದ ವಿದ್ಯಾರ್ಥಿನಿಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಿಜಾಬ್ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಯಾಗಿಲ್ಲ. ಆದ್ದರಿಂದ ಶುಕ್ರವಾರದಂದು ಹಿಜಾಬ್ ಧರಿಸಲು ಅವಕಾಶ ನೀಡಿ ಮಧ್ಯಂತರ ಆದೇಶ ಹೊರಡಿಸಬೇಕು. ಹಿಜಾಬ್ ನಿರ್ಬಂಧಿಸುವುದು ಕುರಾನ್ ನಿರ್ಬಂಧಿಸಿದಂತೆ ಎಂದು ವಾದಿಸಿದರು. ಇದೇ ವೇಳೆ, ತಮ್ಮ ವಾದಕ್ಕೆ ಪೂರಕವಾಗಿ ಹಾಡಿನ ಸಾಲನ್ನೂ ಸೇರಿಸಿದರು.

ಅರ್ಜಿದಾರರ ಪರ ವಕೀಲರ ವಾದ ಮುಕ್ತಾಯವಾದ ಬಳಿಕ ಸರ್ಕಾರದ ಪರ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಗಳ ಪರ ವಕೀಲರು ವಾದ ಮಂಡಿಸಬೇಕಿತ್ತು. ಆದರೆ, ಸರ್ಕಾರ ತನ್ನ ವಾದವನ್ನು ನಾಳೆ ಮಂಡಿಸುವುದಾಗಿ ತಿಳಿಸಿದ್ದರಿಂದ, ಸಿಡಿಸಿ ಪರ ವಕೀಲರು ಸರ್ಕಾರದ ವಾದದ ಬಳಿಕವೇ ತಮ್ಮ ವಾದ ಮಂಡಿಸುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪೀಠ ವಿಚಾರಣೆ ಮುಂದೂಡಿತು.