ಹುಲಿಯನ್ನು ಸೆರೆ ಹಿಡಿಯದಿದ್ದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಗ್ರಾಮಸ್ಥರು…

62
firstsuddi

ಮೈಸೂರು: ಹುಲಿಯನ್ನು ಸೆರೆ ಹಿಡಿದಿಲ್ಲ ಎಂದು ಕೋಪಗೊಂಡ ನಂಜನಗೂಡು ತಾಲೂಕಿನ ಮಹಾದೇವ ನಗರದ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ವೀರಭದ್ರ ಭೋವಿ ಎಂಬ ರೈತ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಮೀಪದ, ನಂಜನಗೂಡು ತಾಲೂಕಿನ ಮಹಾದೇವ ನಗರ ಗ್ರಾಮದ ಮತ್ತಿ ಮರದ ಜೇನುಕಟ್ಟೆಯ ಬಳಿ ದನ ಮೇಯಿಸುತ್ತಿದ್ದಾಗ ಹಸು ಹಾಗೂ ಕರುವಿನ ಮೇಲೆ ಹುಲಿ ದಾಳಿ ನಡೆಸಿತ್ತು. ಆಗ ಹಸುವನ್ನು ರಕ್ಷಿಸಲು ಮುಂದಾದ ವೀರಭದ್ರ ಮೇಲೂ ಹುಲಿ ದಾಳಿ ಮಾಡಿತ್ತು. ಸದ್ಯ ರೈತನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳ ಜೊತೆ ಗ್ರಾಮದ ಕೆಲವರು ಹುಲಿಯನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ಅಲ್ಲದೇ ಅರಣ್ಯ ಇಲಾಖೆ ಸಿಬ್ಬಂದಿ ಮಹಾಂತೇಶ್ ಮೇಲೆ ಹಲ್ಲೆ ನಡೆಸಿದ್ದಾರೆ.

ವರ್ಷದ ಹಿಂದೆ ಹಾದನೂರು ಒಡೆಯನಪುರದ ಮಹದೇವೇಗೌಡ ಎಂಬ ರೈತ ಹುಲಿ ದಾಳಿಗೆ ಬಲಿಯಾಗಿದ್ದರು. ಅಂದಿನಿಂದಲೂ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಆಗ್ರಹಿಸಿದ್ದರು. ಆದರೆ ಪದೇ ಪದೆ ಹುಲಿ ದಾಳಿ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯಾ ಇಲಾಖೆ ಸಿಬ್ಬಂದಿಗೆ ಥಳಿಸಿ ಆಕ್ರೋಶ ಹೊರ ಹಾಕಿದ್ದಾರೆ.