ಹೆಲ್ಮೆಟ್ ವಿಚಾರವಾಗಿ ವಕೀಲನ ಮೇಲೆ ಹಲ್ಲೆ ಪ್ರಕರಣ: ಪಿಎಸ್ಐ ಸೇರಿದಂತೆ ಆರು ಮಂದಿ ಪೊಲೀಸ್ ಸಿಬ್ಬಂದಿ ಅಮಾನತು…

43
firstsuddi

ಚಿಕ್ಕಮಗಳೂರು: ಹೆಲ್ಮೆಟ್ ವಿಚಾರವಾಗಿ ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಪೂಜಾರಿ ಸೇರಿದಂತೆ ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಸ್​ಪಿ ವಿಕ್ರಂ ಅಮ್ಟೆ ಆದೇಶಿಸಿದ್ದಾರೆ.

ವಕೀಲ ಪ್ರೀತಮ್, ಹೆಲ್ಮೆಟ್ ಹಾಕದ್ದಕ್ಕೆ ಪೊಲೀಸರಿಂದ ಹಲ್ಲೆಗೊಳಗಾದ ವ್ಯಕ್ತಿ. ಹೆಲ್ಮೆಟ್ ಹಾಕದೇ ಬೈಕ್ ರೈಡ್ ಮಾಡುತ್ತಿದ್ದಾಗ ಪ್ರೀತಮ್ ನನ್ನು ಪೊಲೀಸರು ಹಿಡಿದಿದ್ದರು. ಈ ವೇಳೆ ಫೈನ್ ಕಟ್ಟುವುದಾಗಿ ಹೇಳಿ, ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಪೊಲೀಸರು, ಫೈನ್ ಕಟ್ಟುತ್ತೇನೆಂದ್ರೂ ಬೈಕ್ ಕೀ ಕಿತ್ತುಕೊಂಡು ಠಾಣೆಗೆ ಕರೆದೊಯ್ದಿದ್ದರು. ಬೈಕ್ ಕೀ ಕಿತ್ತುಕೊಂಡ ಬಗ್ಗೆ ಪ್ರಶ್ನಿಸಿದ್ದಕ್ಕೆ ವಕೀಲ ಪ್ರೀತಮ್ ಅವರ ಬೆನ್ನು, ಎದೆ, ಕೈಯಲ್ಲಿ ರಕ್ತ ಬರುವಂತೆ ಅಮಾನುಷವಾಗಿ ಪೊಲೀಸರು ಥಳಿಸಿದ್ದಾರೆ.

ಠಾಣೆಯಲ್ಲಿ ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಠಾಣೆ ಮುಂದೆ ಜಮಾಯಿಸಿದ್ದ ವಕೀಲರು ಆಕ್ರೋಶ ಹೊರಹಾಕಿದ್ದರು. ಸ್ಥಳಕ್ಕೆ ಆಗಮಿಸಿದ ಎಸ್​ಪಿ ವಿಕ್ರಂ, ವಿಚಾರಣೆ ನಡೆಸಿದ್ದು, ಪಿಎಸ್ಐ ಸೇರಿದಂತೆ ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.

ಹಲ್ಲೆ ಮಾಡಿದ ಪೊಲೀಸರನ್ನ ಬಂಧಿಸುವಂತೆ ಪಟ್ಟು ಹಿಡಿದ ವಕೀಲರು, ಠಾಣೆಯಿಂದ ಎಸ್​ಪಿ ತೆರಳದಂತೆ ಅಡ್ಡ ಕುಳಿತಿದ್ದರು. ಹಲ್ಲೆ ಪ್ರಕರಣ ಸಂಬಂಧ ಆರು ಮಂದಿ ವಿರುದ್ಧ ಐಪಿಸಿ ಸೆಕ್ಷನ್ 307, 324, 506, 504ರ ಅಡಿ ಪ್ರಕರಣ ದಾಖಲಾಗಿದೆ. ಇಬ್ಬರು ಪೊಲೀಸರು ಠಾಣೆಯಲ್ಲೇ ಇದ್ದರೂ ಬಂಧಿಸದಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಕೀಲರ ಸಂಘ, ಆರೋಪಿಗಳನ್ನು ಬಂಧಿಸೋವರೆಗೆ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದೆ.