ಹಾವೇರಿ: ಅಣ್ಣನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಬಳಿಕ ಆರೋಪಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ.
ಗೀತಾ ಮರಿಗೌಡ್ರು (32), ಅಕುಲ್ (10) ಹಾಗೂ ಅಂಕಿತಾ (7) ಕೊಲೆಯಾದ ದುರ್ದೈವಿಗಳು. ಇವರನ್ನು ಕುಮಾರಗೌಡ ಮರಿಗೌಡ್ರು (35) ಕೊಲೆಗೈದು ಪರಾರಿಯಾಗಿದ್ದಾನೆ.
ಕೊಲೆಯಾದ ಗೀತಾ ಅವರ ಗಂಡ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಮರಿಗೌಡ್ರು ತನ್ನ ಸ್ವಂತ ಅಣ್ಣ ಹೊನ್ನೆಗೌಡನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಕುಟುಂಬದೊಳಗಿನ ಜಗಳವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










