ಚಿಕ್ಕಮಗಳೂರು: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ, ಹಳ್ಳಕ್ಕೆ ಉರುಳಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು ಐವರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೀಕನಹಳ್ಳಿ-ಕಸ್ಕೆಬೈಲು ಕ್ರಾಸ್ ಬಳಿ ನಡೆದಿದೆ.
ಮೃತ ದುರ್ದೈವಿಯನ್ನು 45 ವರ್ಷದ ಸುರೇಖ ಎಂದು ಗುರುತಿಸಲಾಗಿದೆ. ಈಕೆ ಬೆಂಗಳೂರಿನ ಯಲಹಂಕ ನಿವಾಸಿ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ಬಸ್ ಇಂದು ಬೆಳಗ್ಗಿನ ಜಾವ 4.45ಕ್ಕೆ ಚೀಕನಹಳ್ಳಿ ಬಳಿ ಬರುತ್ತಿದ್ದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಈ ಬಸ್ಸು ಬೆಂಗಳೂರಿನಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಹೊರನಾಡು, ಶೃಂಗೇರಿಗೆ ಪ್ರವಾಸಕ್ಕೆ ಹೊರಟಿತ್ತು ಎನ್ನಲಾಗಿದೆ.
ಬಸ್ಸಿನಲ್ಲಿ ರಾಜನಗುಂಟೆ ಹಾಗೂ ಕೆ.ಆರ್.ಪುರಂನ 48ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ 10ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಗಾಯಾಳುಗಳಿಗೆ ಹಾಸನ ಜಿಲ್ಲೆಯ ಬೇಲೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಸ್ಕೆಬೈಲು-ಚೀಕನಹಳ್ಳಿ ಈ ತಿರುವಿನಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಕಳೆದ 10 ತಿಂಗಳಲ್ಲಿ 70ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಇದರಿಂದ ಹಳ್ಳಕ್ಕೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಹತ್ತಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೂ ಸಹ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇವೆ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.










