ಕಠ್ಮಂಡು: ನೇಪಾಳದ ಹಲವೆಡೆ ಭೀಕರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 128ಕ್ಕೆ ಏರಿಕೆಯಾಗಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ನೇಪಾಳದ ರಿಮೋಟ್ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಹಲವು ಮನೆಗಳು ಹಾಗೂ ಕಟ್ಟಡಗಳು ಕುಸಿದಿದ್ದು, ಹಲವು ಬಿಲ್ಡಿಂಗ್‌ಗಳಿಗೆ ಹಾನಿಯಾಗಿದೆ. ತಡರಾತ್ರಿ ಭೂಕಂಪ ಸಂಭವಿಸಿರೋದರಿಂದ ಕತ್ತಲಲ್ಲಿ ಅವಶೇಷಗಳನ್ನು ಹೊರತೆಗೆಯಲಾಗಿದ್ದು, ಕುಸಿದ ಮನೆಗಳು ಮತ್ತು ಕಟ್ಟಡಗಳ ಅವಶೇಷಗಳಲ್ಲಿ ಬದುಕುಳಿದವರನ್ನು ಹುಡುಕುತ್ತಿದ್ದಾರೆ.
ನೇಪಾಳದ ರುಕ್ಕುಂ ಪಶ್ಚಿಮದಲ್ಲಿ 35ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, ಜಾಜರಕೋಟ್ ಜಿಲ್ಲೆಯಲ್ಲಿ 90ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆಯೆಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ಭೂಕಂಪದ ಕಂಪನಗಳು 500 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ನವದೆಹಲಿಯನ್ನು ಸಹ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿ – ಎನ್‌ಸಿಆರ್ ಸೇರಿ ಉತ್ತರ ಭಾರತದ ಹಲವೆಡೆ ಭೂಕಂಪದ ಅನುಭವವಾಗಿದ್ದು, ನಿದ್ರೆಯಲ್ಲಿದ್ದ ಜನತೆ ಗಾಬರಿಯಿಂದ ಎದ್ದು ಮನೆಯಿಂದ ಹೊರಬಂದಿದ್ದಾರೆ.
ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಭೀಕರ ಪ್ರಾಣಹಾನಿ ಮತ್ತು ಭೂಕಂಪದಿಂದ ಉಂಟಾದ ತೀವ್ರ ಮೂಲಸೌಕರ್ಯ ಹಾನಿಯ ಬಗ್ಗೆ ಸಂತಾಪ ಸೂಚಿಸಿದ್ದಾರೆ.










