ಮುಂದಿನ 23 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 2,600 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶ…

57
firstsuddi

ನವದೆಹಲಿ: ಮುಂದಿನ 23 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 2,600 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಆದೇಶಿಸಿದೆ.

ದೆಹಲಿಯಲ್ಲಿಂದು ನಡೆದ ಸಭೆಯಲ್ಲಿ ನವೆಂಬರ್ 1ರಿಂದ 15ರ ತನಕ ನಿತ್ಯ 2,600 ಕ್ಯೂಸೆಕ್‌ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶವನ್ನು ಒಪ್ಪದ ಕರ್ನಾಟಕ, ತಮಿಳುನಾಡಿಗೆ ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ವಾದಿಸಿತು. ಸಿಡಬ್ಲ್ಯೂಎಂಎ ಸಭೆಯಲ್ಲಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್ ಭಾಗಿಯಾಗಿದ್ದರು.

ಕೆಆರ್‌ಎಸ್‌ ಒಳಹರಿವು ಶೂನ್ಯವಾಗಿದೆ. ಎಲ್ಲ ಜಲಾಶಯಗಳು ಸೇರಿ 51 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕುಡಿಯುವುದಕ್ಕೂ ನೀರಿನ ಕೊರತೆ ಉಂಟಾಗಲಿರುವುದರಿಂದ ಮಿಕ್ಕಿರುವ ನೀರನ್ನು ಸಂರಕ್ಷಣೆ ಮಾಡಿಕೊಳ್ಳಲೇಬೇಕಾಗಿದ್ದು, ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ವಾದಿಸಿದ ಕರ್ನಾಟಕ ಅಧಿಕಾರಿಗಳು, ಮೇಕೆದಾಟು ಯೋಜನೆ ಚರ್ಚೆಗೆ ಪಟ್ಟು ಹಿಡಿದರು.

ಸಭೆಯ ಬಳಿಕ ಮಾತನಾಡಿದ ಎಸಿಎಸ್ ರಾಕೇಶ್ ಸಿಂಗ್, ತಮಿಳುನಾಡು 13,000 ಕ್ಯೂಸೆಕ್ ನೀರು ಬಿಡಲು ಆಗ್ರಹಿಸಿತು. ನವೆಂಬರ್ 23 ರ ತನಕ 2,600 ಕ್ಯೂಸೆಕ್ ನೀರು ಬಿಡಲು ಪ್ರಾಧಿಕಾರ ಆದೇಶಿಸಿದೆ. ಈ ನಡುವೆ ಮತ್ತೊಂದು ಸಕಾರಾತ್ಮಕ ಬೆಳವಣಿಗೆ ಆಗಿದೆ. ಮೇಕೆದಾಟು ಯೋಜನೆ ಚರ್ಚೆಗೆ ಪ್ರತ್ಯೇಕ ದಿನಾಂಕ ನಿಗದಿ ಮಾಡಲು ಪ್ರಾಧಿಕಾರ ಒಪ್ಪಿದೆ. ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಲಾಗುತ್ತದೆ. ತಮಿಳುನಾಡಿನವರು ಇಂಟರ್ ಲಿಂಕಿಂಗ್ ಯೋಜನೆ ಚರ್ಚೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಕರ್ನಾಟಕದ ಆಕ್ಷೇಪ ಇದೆ. ಪ್ರತ್ಯೇಕ ಸಭೆಯಲ್ಲಿ ಈ ಎರಡು ಯೋಜನೆಗಳು ಚರ್ಚೆಗೆ ಬರಬಹುದು ಎಂದರು.