ಚಿತ್ರದುರ್ಗ: ಅಮೆರಿಕದ ಮಲ್ಟಿನ್ಯಾಷನಲ್ ಕಂಪನಿಯೊಂದರಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ನಂಬಿಸಿ, ಕೋಟಿಗಟ್ಟಲೆ ಹಣ ಪಡೆದು ವಂಚಿಸಿದ್ದಲ್ಲದೇ, ಸತತ 4 ವರ್ಷಗಳಿಂದ ಯುವತಿಯನ್ನು ಪ್ರೀತಿಸುವ ನಾಟಕವಾಡಿ, ಅತ್ಯಾಚಾರವೆಸಗಿದ್ದಾನೆಂದು ಆರೋಪಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಉದ್ಯೋಗದ ಆಸೆಗೆ ಯುವಕನಿಂದ ಮೋಸ ಹೋಗಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿರುವ ಯುವತಿ ಚಿತ್ರದುರ್ಗ ಮೂಲದವರು. 2019 ರಲ್ಲಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಚಿತ್ರದುರ್ಗ ಮೂಲದ ಸೌರಭ್ ಎಂಬ ಯುವಕನ ಪರಿಚಯವಾಗಿದ್ದು, ಇಬ್ಬರ ಮಧ್ಯೆ ಪರಸ್ಪರ ಸ್ನೇಹ, ಆತ್ಮೀಯತೆ ಬೆಳೆದಿತ್ತು.
ಆಗ ಅಮೆರಿಕ ಸೇರಿದಂತೆ ಮತ್ತಿತರ ವಿದೇಶದ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ನಿನಗೆ ಕೆಲಸ ಕೊಡಿಸ್ತೀನಿ ಅಂತ ಯುವತಿಯನ್ನು ನಂಬಿಸಿದ್ದ ಸೌರಭ್. ಫೇಕ್ ಆಫರ್ ಲೆಟರ್ ಕೊಟ್ಟು, ಈಕೆಯಿಂದ ಉದ್ಯೋಗದ ನೆಪದಲ್ಲಿ ಕೋಟಿಗಟ್ಟಲೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರತಿದಿನ ಮೊಬೈಲ್ ಸಂಭಾಷಣೆಯಲ್ಲಿ ತೊಡಗಿದ್ದ ಅಸಾಮಿ ಸಾಕಷ್ಟು ಬಾರಿ ಆಕೆಯನ್ನು ಹೊರ ದೇಶಕ್ಕೆ ಹೋಗಬೇಕು, ರೆಡಿಯಾಗಿರು ಎಂದು ಹೇಳಿ, ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ನನ್ನನ್ನು ಅವನಿಗೆ ಬೇಕಾದ ರೀತಿ ಬಳಸಿಕೊಂಡು ಇಂದು ಬೀದಿಯಲ್ಲಿ ಬಿಟ್ಟಿದ್ದಾನೆ. ನನ್ನ ಕುಟುಂಬ ಕಷ್ಟ ಪಟ್ಟು ಅವನಿಗೆ ಹಣ ಹೊಂದಿಸಿ ಕೊಟ್ಟಿದ್ದೀವಿ, ಆದರೂ ಕರುಣೆ ಇಲ್ಲದೇ, ನನಗೂ ಮದುವೆ ಆಗುವುದಾಗಿ ಮೋಸ ಮಾಡಿದ್ದಾನೆ. ಅಲ್ಲದೇ, ನಿನಗೆ ಬೇರೆ ದೇಶದ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಕೊಡಿಸ್ತೀನಿ ಎಂದು ಎರಡೂವರೆ ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾನೆ. ತೆಗೆದುಕೊಂಡಿರುವ ಕೋಟಿಗಟ್ಟಲೇ ಹಣವನ್ನು ಕೊಡು ಎಂದು ಬೇಡಿದರೂ ದಿನೇ ದಿನೇ ನಮಗೆ ಕೊಲೆ ಬೆದರಿಕೆ ಹಾಕ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಲ್ಲದೇ 2 ತಿಂಗಳ ಹಿಂದೆ ನೊಂದ ಯುವತಿಯ ತಂದೆ ಕೂಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.










