ಹುಬ್ಬಳಿ : ಆಪಾದನೆ ಮಾಡುವವರು ಮೊದಲು ಶುದ್ಧ ಹಸ್ತರಿರಬೇಕು. ಆಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ದಿಂಬು ಹಾಸಿಗೆಯನ್ನೂ ಬಿಟ್ಟಿಲ್ಲ. ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಸಿದ್ದರಾಮಯ್ಯ ಎಷ್ಟೆಲ್ಲಾ ಟಾರ್ಗೆಟ್ ಕೊಟ್ಟಿದ್ದರು ಅಂತ ಎಂಬಿ ಪಾಟೀಲ್, ಜಾರ್ಜ್, ಮಹದೇವಪ್ಪರಿಗೆ ಕೇಳಬೇಕು. ಭ್ರಷ್ಟಾಚಾರದ ಕೂಪದಲ್ಲಿ ಇರುವವರು ಆಪಾದನೆ ಮಾಡಿದರೆ ನಡೆಯಲ್ಲ ಎಂದರು.
ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ. ಹೀಗಾಗಿ ರಾಜ್ಯ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ಮಾಡಿದ ಕರ್ಮಕಾಂಡ ಒಂದಾ ಎರಡಾ? ಎಂದು ಸಿಎಂ ಪ್ರಶ್ನೆ ಮಾಡಿದರು. ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆದುಕೊಳ್ಳಬಹುದು ಅನ್ನೋದು ಮೂರ್ಖತನ. ಚುನಾವಣಾ ಅಖಾಡವಿದೆ, ಜನರೇ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್ ನ ಕೈ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಜನ ಈ ಬಂದ್ ಕರೆಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದರು.
ಬೆಳಗಾವಿ ರಾಜಹಂಸಗಡದಲ್ಲಿ ಕಾಂಗ್ರೆಸ್ನಿಂದ ಶಿವಾಜಿ ಪ್ರತಿಮೆ ಮರು ಉದ್ಘಾಟನೆ ಬಗ್ಗೆ ಪ್ರತಿಕ್ರಿಯಿಸಿ, ಇದೊಂದು ಹಾಸ್ಯಾಸ್ಪದ ಸಂಗತಿ. ಸರ್ಕಾರವೇ ಬಂದು ಮೂರ್ತಿ ಉದ್ಘಾಟನೆ ಮಾಡಿದ ಮೇಲೆ ಈ ರೀತಿ ಮಾಡೋದು ಸರಿಯಲ್ಲ. ಸರ್ಕಾರದಿಂದ ಉದ್ಘಾಟನೆ ಮಾಡಿದ ನಂತರ ಒಣ ಪ್ರತಿಷ್ಠೆಗಾಗಿ ಈ ರೀತಿ ಮಾಡಲಾಗಿದೆ. ರಾಷ್ಟ್ರನಾಯಕರ ಹೆಸರಲ್ಲಿ ಈ ರೀತಿ ರಾಜಕೀಯ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು.










