ಕಲಬುರಗಿ : ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿಬಂದಿವೆ. ಇದರಿಂದ ಕ್ಷಣಕಾಲ ಆತಂಕ ಸೃಷ್ಟಿಯಾಗಿತ್ತು.
ಜೇವರ್ಗಿಯಲ್ಲಿ ನಡೆಯುತ್ತಿರವ ವಿಜಯ ಸಂಕಲ್ಪ ರಥಯಾತ್ರೆ ಸಂಬಂಧ ಯಡಿಯೂರಪ್ಪ ಜೇವರ್ಗಿ ಆಗಮಿಸಿದ್ದರು. ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಗೆ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಲ್ಯಾಂಡಿಂಗ್ ವೇಳೆಯಲ್ಲಿ ಭಾರೀ ಗಾಳಿ ಬೀಸಿದ ಪರಿಣಾಮ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದಿವೆ.
ತಕ್ಷಣವೇ ಎಚ್ಚೆತ್ತುಕೊಂಡ ಪೈಲಟ್, ಹೆಲಿಕಾಪ್ಟರ್ ಅನ್ನು ಬೇರೆಡೆಗೆ ತೆಗೆದುಕೊಂಡು ಹೋಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ಲಾಸ್ಟಿಕ್ ಚೀಲಗಳನ್ನು ತೆರವುಗೊಳಿಸಿದರು. ಬಳಿಕ ಪೈಲೆಟ್ ಒಂದೆರಡು ಸುತ್ತು ಹಾರಾಟ ನಡೆಸಿ, ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ್ದಾರೆ.
ಹೆಲಿಕ್ಯಾಪ್ಟರ್ ಮೇಲೆ ಪ್ಲಾಸ್ಟಿಕ್ ಚೀಲಗಳು ತೂರಿಬಂದಿದ್ದರಿಂದ ಅಧಿಕಾರಿಗಳು ಮತ್ತು ಪೊಲೀಸರು ಕಕ್ಕಾಬಿಕ್ಕಿಯಾಗಿದ್ದರು. ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದೆ ಇರುವುದರಿಂದ ಭದ್ರತಾ ಲೋಪ ಎದುರಾಗಿದೆ.










