ಎಲ್‍ಕೆಜಿ ಪ್ರವೇಶಕ್ಕೆ ವಯೋಮಿತಿ ನಿಗದಿ- 4 ವರ್ಷ ಕಡ್ಡಾಯ…

58
firstsuddi

ಬೆಂಗಳೂರು: ಎಲ್‍ಕೆಜಿ ಮಕ್ಕಳ ಪ್ರವೇಶಕ್ಕೆ ನಾಲ್ಕು ವರ್ಷ ವಯೋಮಿತಿ ನಿಗದಿಪಡಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದ ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಕಡ್ಡಾಯವಾಗಿ 6 ವರ್ಷ ವಯಸ್ಸು ತುಂಬಿರಬೇಕೆಂಬ ನಿಯಮ 2025-26ನೇ ಸಾಲಿನಿಂದ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಪ್ರಸಕ್ತ 2023-24ನೇ ಸಾಲಿನಿಂದ ಎಲ್‍ಕೆಜಿಗೆ ಈ ವಯಸ್ಸನ್ನು ನಿಗದಿ ಪಡಿಸಲಾಗಿದೆ.

‘ಶಿಕ್ಷಣ ಹಕ್ಕು ಕಾಯ್ದೆ-2009’ ಮತ್ತು ‘ಕಡ್ಡಾಯ ಶಿಕ್ಷಣ ನಿಯಮ’ದಂತೆ ಈಗಾಗಲೇ ಆದೇಶಿಸಿರುವಂತೆ 2025-26ನೇ ಸಾಲಿನಿಂದ 1ನೇ ತರಗತಿ ದಾಖಲಾತಿಗೆ ಮಗುವಿಗೆ 6 ವರ್ಷ ತುಂಬಿರಬೇಕೆಂಬ ನಿಯಮದಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಇರುವುದಿಲ್ಲ. ಹಾಗಾಗಿ ಈ ಸಾಲಿನಿಂದ ಎಲ್‍ಕೆಜಿಗೆ ಮಕ್ಕಳನ್ನು ದಾಖಲಿಸುವ ಪೋಷಕರು 4 ವರ್ಷ ವಯಸ್ಸು ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ಎಲ್‍ಕೆಜಿಗೆ ದಾಖಲಿಸಬೇಕು. ಆಗ ಮಾತ್ರ ಅವರು 1ನೇ ತರಗತಿಗೆ ಪ್ರವೇಶ ಪಡೆಯುವಾಗ ಅವರಿಗೆ 6 ವರ್ಷ ಪೂರ್ಣಗೊಳ್ಳಲಿದೆ. ಇಲ್ಲದಿದ್ದರೆ ಎಲ್‍ಕೆಜಿ, ಯುಕೆಜಿ ಮುಗಿಸಿದ್ದರೂ ವಯಸ್ಸು 6 ವರ್ಷ ಪೂರ್ಣಗೊಳ್ಳದ ಕಾರಣಕ್ಕೆ ಒಂದನೇ ತರಗತಿಗೆ ಪ್ರವೇಶ ದೊರೆಯದೆ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.