ಒಣ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತ, ಸಂಕಷ್ಟದಲ್ಲಿ ಬೆಳೆಗಾರರು.

33

ಬಳ್ಳಾರಿ: ಬೆಳೆದ ರೈತರ ಪಾಲಿಗೆ ಯಾವಗಲೂ ಸಿಹಿಯಾಗಿರುತ್ತಿದ್ದ ಮೆಣಸಿನಕಾಯಿ, ಈಗ ಬೆಳೆಗಾರರಿಗೂ ಅಕ್ಷರಶಃ ಖಾರವಾಗಿದೆ. ಗಣಿನಾಡು ಬಳ್ಳಾರಿಯಲ್ಲಿ ಬಹುತೇಕ ರೈತರು ಮೆಣಸಿನಕಾಯಿ ಬೆಳೆಯನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಈ ವರ್ಷವಂತೂ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನೇ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಸಾಲ ಸೋಲ ಮಾಡಿ ಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಸಂಪೂರ್ಣ ಕುಸಿತ ಕಂಡಿದೆ. ಮೂರು ವರ್ಷಗಳಿಂದ 50 ಸಾವಿರ ರೂಪಾಯಿಯಿಂದ 60 ಸಾವಿರ ರೂಪಾಯಿ ವರಗೆ ಒಂದು ಕ್ವಿಂಟಲ್ ಮೆಣಸಿನಕಾಯಿ ಬೆಳೆ ಮಾರಾಟವಾಗಿತ್ತು. ಆದರೆ ಈ ವರ್ಷ ಸಂಪೂರ್ಣ ಪಾತಾಳಕ್ಕೆ ಕುಸಿದಿದೆ. ಒಂದು ಕ್ವಿಂಟಲ್ ಮೆಣಸಿನಕಾಯಿಗೆ 8 ರಿಂದ 10 ಸಾವಿರ ರೂಪಾಯಿ ಮಾತ್ರ ದೊರೆಯುತ್ತಿದೆ. ಹೀಗಾಗಿ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.