ಕನ್ನಡಿಗರು ಕನ್ನಡದ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುವುದರಿಂದ ಅವರಲ್ಲಿ ಮಾತೃಭಾಷೆಯ ಬಗ್ಗೆ ಗೌರವ, ಪ್ರೀತಿ, ಅಭಿಮಾನ ಬೆಳೆಯುತ್ತದೆ : ಡಾ|| ಸಿ.ಕೆ.ಸುಬ್ರಾಯ…

247
firstsuddi

ಚಿಕ್ಕಮಗಳೂರು : ಕನ್ನಡದ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ|| ಸಿ.ಕೆ.ಸುಬ್ರಾಯ ಸಲಹೆ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಸುವರ್ಣ ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪರಿಷತ್ತಿನ 105 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಿಗರು ಕನ್ನಡದ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುವುದರಿಂದ ಅವರಲ್ಲಿ ಮಾತೃಭಾಷೆಯ ಬಗ್ಗೆ ಗೌರವ, ಪ್ರೀತಿ, ಅಭಿಮಾನ ಬೆಳೆಯುತ್ತದೆ ಹಾಗಾದಾಗ ಮಾತ್ರ ಭಾಷೆ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದು ಕಿವಿಮಾತು ಹೇಳಿದರು.
ನಾಡು, ನುಡಿ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಾಡಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಅಂದಿನ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರು ಮತ್ತು ಪ್ರಜಾಪ್ರತಿನಿಧಿ ನಂಜುಂಡಯ್ಯನವರು ಸೇರಿದಂತೆ ಹಲವರ ಪರಿಶ್ರಮದಿಂದ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ ಇಂದು ಹೆಮ್ಮರವಾಗಿ ಬೆಳೆದಿದೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಮತ್ತು ಅದರ ಬೆಳವಣಿಗೆಯ ಹಿನ್ನೆಲೆ ಕುರಿತು ಉಪನ್ಯಾಸ ನೀಡಿದ ಸಾಹಿತಿ ಡಾ|| ಬೆಳವಾಡಿ ಮಂಜುನಾಥ್ ಬ್ರಿಟಿಷರ ವಿರೋಧದ ನಡುವೆಯೂ ನಾಡು, ನುಡಿ ಮತ್ತು ಸಂಸ್ಕøತಿಯ ಉಳಿವಿಗಾಗಿ ನಮ್ಮ ಹಿರಿಯರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಮುನ್ನಡೆಸಿದ್ದಾರೆ ಎಂದು ತಿಳಿಸಿದರು.
ದುಬಾರಿ ಬೆಲೆ ಕೊಟ್ಟು ಖರೀದಿಸಬೇಕಾಗಿದ್ದ ಪುಸ್ತಕಗಳು ಕನ್ನಡ ಸಾಹಿತ್ಯ ಪರಿಷತ್ತಿನಿಂದಾಗಿ ಕಡಿಮೆ ಬೆಲೆಗೆ ದೊರೆಯುವಂತಾಯಿತು, ಪರಿಷತ್ತಿನಿಂದಾಗಿ ಸಂಶೋಧನಾ ಗ್ರಂಥಗಳು ಹೊರಬಂದವು ತಳಮಟ್ಟದಿಂದ ಕನ್ನಡವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ ಆರಂಭಗೊಂಡಿತು, 22 ವರ್ಷಗಳ ಕಾಲ ಕನ್ನಡದ ಪಠ್ಯಪುಸ್ತಕಗಳನ್ನು ಕನ್ನಡ ಸಾಹಿತ್ಯ ಪರಿಷತ್ ವಿಶ್ವವಿದ್ಯಾಲಯಗಳಿಗೆ ನೀಡುತ್ತಿತ್ತು ಎಂದರು.
ಕನ್ನಡಿಗರ ಜಾಗೃತಿಗಾಗಿ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲು ಆರಂಭಿಸಿತು, ಪರಿಷತ್ತಿನ ಶ್ರಮದಿಂದಾಗಿ ರಾಜ್ಯದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕನ್ನಡ ಶಕ್ತಿ ಕೇಂದ್ರ, ಕನ್ನಡ ಕಾವಲು ಸಮಿತಿ ರಚನೆಯಾದವು ಇಷ್ಟಾದರೂ ಸಹ ನಾಡಿನ ನೆಲ, ಜಲದ ಸಮಸ್ಯೆಗಳು ಬಗೆಹರಿಯದೆ ಇನ್ನೂ ಜೀವಂತವಾಗಿವೆ, ಆಡಳಿತದಲ್ಲಿ ಕನ್ನಡ ಸಂಪೂರ್ಣವಾಗಿ ಜಾರಿಯಾಗಿಲ್ಲ, ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದು ವಿಷಾದಿಸಿದರು.
ಕನ್ನಡ ಸಾಹಿತ್ಯ ಪರಿಷತ್ 105 ವರ್ಷಗಳ ಕಾಲ ಶ್ರಮವಹಿಸಿ ಕನ್ನಡಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ ಎಂದ ಅವರು ನಾಡು, ನುಡಿ, ನೆಲ, ಜಲದ ರಕ್ಷಣೆ ಯಾವುದೆ ಒಂದು ಸಂಸ್ಥೆಯಿಂದ ಮಾತ್ರ ಸಾಧ್ಯವಿಲ್ಲ, ಜನ ಜಾಗೃತರಾಗಿ ಸಹಕಾರ ನೀಡಿದರೆ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ನಾಡಿನ ನೆಲ, ಜಲ ಮತ್ತು ಭಾಷೆಯ ರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ ಕಳೆದ 105 ವರ್ಷಗಳಿಂದ ನಿರಂತರವಾಗಿ ದುಡಿಯುತ್ತಿದೆ ಎಂದರು.
ಲೋಕಲ್ ಆಗಿದ್ದ ಗಾಯಕ ಹನುಮಂತು ಇಂದು ಗ್ಲೋಬಲ್ ಆಗಿರುವುದಕ್ಕೆ ಭಾಷೆ ಮತ್ತು ಸಾಹಿತ್ಯ ಕಾರಣ ಎಂದ ಅವರು ಕನ್ನಡಿಗರು ಇದನ್ನು ಅರಿಯಬೇಕು, ಮಾತೃಭಾಷೆಯ ಬಗ್ಗೆ ಇರುವ ತಾತ್ಸಾರ ಮನೋಭಾವವನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದ ನಡುವೆ ಗಾಯಕ ಕೆ.ಹೆಚ್.ಬಸವರಾಜು ಅವರಿಂದ ಕನ್ನಡ ಗೀತೆಗಳ ಗಾಯನ ನಡೆಯಿತು, ಪರಿಷತ್ತಿನಿಂದ ಬಸವರಾಜು ಅವರನ್ನು ಸನ್ಮಾನಿಸಲಾಯಿತು, ಇತ್ತೀಚೆಗೆ ನಿಧನರಾದ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣಯ್ಯ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಪತ್ರಕರ್ತ ಹಿರೇನಲ್ಲೂರು ಶಿವು, ತಾಲ್ಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಉಪಸ್ಥಿತರಿದ್ದರು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್ ಸ್ವಾಗತಿಸಿದರು, ಜಿಲ್ಲಾ ಸಂಚಾಲಕ ಎಂ.ಆರ್.ಪ್ರಕಾಶ್ ವಂದಿಸಿದರು.