ಬೆಳಗಾವಿ: ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನಡೆಯುತ್ತಿದ್ದು, ದೇಶದ ಹಲವು ಕಡೆಯಿಂದ ಕಾಂಗ್ರೆಸ್ ನಾಯಕರು ಆಗಮಿಸಿದ್ದಾರೆ. ಇದೇ ವೇಳೆ, ಬೆಳಗಾವಿಯ ವೀರಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗಾಂಧೀಜಿ ಪ್ರತಿಮೆ ಅನಾವರಣಗೊಳಿಸಿಸಲಾಯಿತು. ನಂತರ ಕಾಂಗ್ರೆಸ್ ನಾಯಕರು ಗಾಂಧಿ ಪ್ರತಿಮೆ ಎದುರು ಫೋಟೊ ತೆಗೆಸಿಕೊಳ್ಳಲಾಯಿತು. ನಂತರ ಸಿಎಂ ಸಿದ್ದರಾಮಯ್ಯ ಖಾದಿ ಉತ್ಸವಕ್ಕೆ ಚಾಲನೆ ನೀಡಿದರು. ಬೆಳಗಾವಿ ನಗರದ ಸರ್ದಾರ್ ಮೈದಾನದಲ್ಲಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ನಡೆಯುತ್ತಿದೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನ ಕೂಡ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಹಲವು ಸಚಿವರು ಸೇರಿ ಉತ್ಸವಕ್ಕೆ ಸಾಥ್ ನೀಡಿದರು. ಈ ಅಧಿವೇಶನಕ್ಕೆ 100 ವರ್ಷಗಳಾದ ಹಿನ್ನಲೆ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಶತಮಾನೋತ್ಸವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು, ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಸತ್ಯಾಗ್ರಹ ಬೈಠಕ್ ಎಂದು ಕಾಂಗ್ರೆಸ್ ನಾಮಕರಣವನ್ನು ಮಾಡಿದೆ. ಮೈಸೂರು ದಸರಾದಂತೆ ಗಡಿ ಜಿಲ್ಲೆ ಕಂಗೊಳಿಸುತ್ತಿದ್ದು, ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ.










