ಕಾರು ಮತ್ತು ಲಾರಿ ಮಧ್ಯೆ ಭೀಕರ ಅಪಘಾತ: ಪತಿ ಎದುರೇ ಪತ್ನಿ ವೈದ್ಯೆ ದುರ್ಮರಣ.

45

ಬೆಳಗಾವಿ: ಲಾರಿ ಮತ್ತು ಕಾರು ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಪತಿ ಎದುರು ಪತ್ನಿ ಮೃತಪಟ್ಟಿರುವ ಮನಕಲಕುವ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೂಡಲಗಿ ತಾಲೂಕಿನ ಸಂಗನಕೇರಿಯ ಡಾ.ಆಶಾ ಕೋಳಿ ಸ್ಥಳದಲ್ಲೇ ಮೃತಪಟ್ಟ ವೈದ್ಯೆ. ಆಶಾ ಅವರ ಪತಿ ಡಾ. ಭೀಮಪ್ಪ ಕೋಳಿ, ಚಾಲಕ ಮಹೇಶ ಖೋತ ಗಂಭೀರವಾಗಿ ಗಾಯಗೊಂಡಿದ್ದಾರೆ. ವೈದ್ಯರು ಧಾರವಾಡದಿಂದ ಬೆಳಗಾವಿ ಕಡೆಗೆ ಬರುವಾಗ ಕಾರು ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಯಾಳುಗಳನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.