ಕೇಂದ್ರ ಮಾಜಿ ಸಚಿವ ಆರ್.ಎಲ್ ಜಾಲಪ್ಪ ನಿಧನ… ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ…

71
firstsuddi

ಬೆಂಗಳೂರು : ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ಸಿಗ, ಆರ್.ಎಲ್ ಜಾಲಪ್ಪ(97) ನಿನ್ನೆ ನಿಧನರಾಗಿದ್ದು, ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ.

ನಿನ್ನೆ ರಾತ್ರಿಯೇ ಅವರ ಪಾರ್ಥಿವ ಶರೀರವನ್ನ ಸ್ವಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿದೆ. ಇಂದು ಸಂಜೆ ನಾಲ್ಕು ಗಂಟೆಗೆ ತೂಬುಗೆರೆ ಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಂತರ ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಕ್ಯಾಂಪಸ್ ನಲ್ಲಿ ಅಂತಿಮ ವಿಧಿವಿಧಾನ ನೆರವೇರಲಿದೆ.

ವಯೋಸಹಜ ಆರೋಗ್ಯ ಸಮಸ್ಯೆ ಜೊತೆಗೆ ಮೂತ್ರಪಿಂಡ ವೈಫಲ್ಯ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಕೋಲಾರ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ 7:30ಕ್ಕೆ ನಿಧನರಾಗಿದ್ದಾರೆ. ಆರ್.ಎಲ್.ಜಾಲಪ್ಪ ಅವರ ಅಗಲಿಕೆಗೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

1925 ಅಕ್ಟೋಬರ್ 19 ರಂದು ಜನಿಸಿದ್ದ ಇವರ ಪೂರ್ಣ ಹೆಸರು ಆರ್.ಲಕ್ಷ್ಮಿ ನಾರಾಯಣಪ್ಪ ಜಾಲಪ್ಪ. ಈಡಿಗ ಸಮುದಾಯದವರಾಗಿದ್ದ ಜಾಲಪ್ಪ 1951 ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದರು. 1996 ರಿಂದ 2009 ರ ವರೆಗೆ ಚಿಕ್ಕಬಳ್ಳಾಪುರ ಲೋಕಸಭೆ ಸದಸ್ಯರಾಗಿ ಆಯ್ಕೆಯಾದ ಇವರು ನಾಲ್ಕು ಬಾರಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಚುನಾಯಿತರಾಗಿದ್ದರು. 1996 ರಿಂದ 98ರ ವರೆಗೆ ಕೇಂದ್ರ ಜವಳಿ(ಟೆಕ್ಸ್ ಟೈಲ್) ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.