ಘನತೆಯಿಂದ ಸಾಯುವ ಹಕ್ಕು: ಸುಪ್ರೀಂ ಕೋರ್ಟ್‍ನ ನಿರ್ದೇಶನ ಜಾರಿಗೆ ತರಲು ಆರೋಗ್ಯ ಇಲಾಖೆ ನಿರ್ಧಾರ.

18

ಬೆಂಗಳೂರು: ರೋಗಿಯ ಘನತೆಯಿಂದ ಸಾಯುವ ಹಕ್ಕಿಗಾಗಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಜಾರಿಗೆ ತರಲು ಕರ್ನಾಟಕ ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ತಿಳಿಸಿದ್ದಾರೆ. ಈ ಸಂಬಂಧ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮರಣ ಇಚ್ಛೆಯ ಉಯಿಲು ಅಥವಾ ಲಿವಿಂಗ್ ವಿಲ್ ಅನ್ನು ಸಹ ಹೊರತಂದಿದೆ ಎಂದು ತಿಳಿಸಿದ್ದಾರೆ, ಇದರಲ್ಲಿ ರೋಗಿಯು ಭವಿಷ್ಯದಲ್ಲಿ ತಮ್ಮ ವೈದ್ಯಕೀಯ ಚಿಕಿತ್ಸೆಯ ಕುರಿತು ತಮ್ಮ ಇಚ್ಛೆಯನ್ನು ದಾಖಲಿಸಬಹುದು. ನಮ್ಮ ರಾಜ್ಯ ಆರೋಗ್ಯ ಇಲಾಖೆ, ಡಿಹೆಚ್‍ಎಫ್‍ಡಬ್ಲ್ಯೂಕೆಎ, ರೋಗಿಯ ಘನತೆಯಿಂದ ಸಾಯುವ ಹಕ್ಕಿಗಾಗಿ ಸುಪ್ರೀಂ ಕೋರ್ಟ್‍ನ ನಿರ್ದೇಶನವನ್ನು ಜಾರಿಗೆ ತರಲು ಐತಿಹಾಸಿಕ ಆದೇಶವನ್ನು ಅಂಗೀಕರಿಸುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಚಿಕಿತ್ಸೆಯ ಸಂದರ್ಭದಲ್ಲಿ ಚೇತರಿಕೆ ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದರೆ ಆ ಸ್ಥಿತಿಯಲ್ಲಿ ಬದುಕಲು ಇಷ್ಟ ಇಲ್ಲದವರು ತಾವು ಚಿಕಿತ್ಸೆಗೆ ಒಳಪಡುವ ಮೊದಲೇ ಈ ರೀತಿಯ ಉಯಿಲು ಬರೆಯಬಹುದು. ಇಂತಹ ಉಯಿಲು ಇದ್ದರೆ ಅದನ್ನು ಜಾರಿಮಾಡುವುದು ವೈದ್ಯರು ಹಾಗೂ ಬಂಧುಗಳ ಕರ್ತವ್ಯವಾಗುತ್ತದೆ. ರೋಗಿಯ ಕೃತಕ ಉಸಿರಾಟ ಅಥವಾ ಜೀವರಕ್ಷಕ ವೈದ್ಯಕೀಯ ಚಿಕಿತ್ಸೆಗೆ ತಡೆ ನೀಡಲು ಇದರಿಂದ ವೈದ್ಯರಿಗೆ ಅವಕಾಶ ಇರುತ್ತದೆ. ಬದುಕುವುದಿಲ್ಲ ಎಂದು ಗೊತ್ತಿದ್ದೂ ಅನಗತ್ಯವಾದ ದುಬಾರಿ ವೆಚ್ಚದ ಚಿಕಿತ್ಸೆ ನೀಡುವುದನ್ನು ತಪ್ಪಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.