ಚಿಕ್ಕಮಗಳೂರು: ಕಾಫಿ ಬೆಳೆಗಾರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ…

183

ಚಿಕ್ಕಮಗಳೂರು: ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾಫಿ ಬೆಳೆಗಾರರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಆಲ್ದೂರು ಕಾಫಿ ಬೆಳೆಗಾರರ ಸಂಘದ ನೇತೃತ್ವದಲ್ಲಿ ಆಲ್ದೂರು ಮತ್ತು ಸುತ್ತಮುತ್ತಲ ಗ್ರಾಮಗಳಿಂದ ವಾಹನಗಳಲ್ಲಿ ಆಗಮಿಸಿದ ನೂರಾರು ಬೆಳೆಗಾರರು ರಾಷ್ಟ್ರಪಿತ ಮಹಾತ್ಮಾ ಗಾಂಧೀ ಅವರ ಪ್ರತಿಮೆ ಬಳಿ ಧರಣಿ ನಡೆಸಿ ಕೇಂದ್ರ ಸರ್ಕಾರ ತಕ್ಷಣ ನೆರವಿಗೆ ಧಾವಿಸುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಜಿಎಫ್ ಮಾಜಿ ಉಪಾಧ್ಯಕ್ಷ ಡಿ.ಎಂ.ವಿಜಯ್ ಅತಿವೃಷ್ಠಿ, ಅನಾವೃಷ್ಠಿ, ಬೆಲೆ ಕುಸಿತ, ಬೆಳೆ ಕುಂಠಿತ ಗಿಡಗಳಿಗೆ ರೋಗಭಾದೆ, ಕಾರ್ಮಿಕರ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಂದ ಕಾಫಿ ಬೆಳೆಗಾರರು ತತ್ತರಿಸಿದ್ದಾರೆ, ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಬೆಳೆ ನಷ್ಟಕ್ಕೊಳಗಾಗಿ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ ಎಂದರು.
ಕಾಂಗ್ರೇಸ್ ನೇತೃತ್ವದ ಹಿಂದಿನ ಕೇಂದ್ರ ಸರ್ಕಾರ ಕಾಫಿ ಬೆಳೆಗಾರರಿಗೆ ಹಲವು ಪ್ಯಾಕೇಜ್‍ಗಳನ್ನು ನೀಡುವ ಮೂಲಕ ಅವರಿಗೆ ಸಹಾಯ ಹಸ್ತ ಚಾಚಿತ್ತು, ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾಫಿ ಉದ್ಯಮ ಅವನತಿಯ ಹಾದಿ ಹಿಡಿದಿದ್ದರೂ ಬೆಳೆಗಾರರತ್ತ ತಿರುಗಿ ನೋಡುತ್ತಿಲ್ಲ ಎಂದು ದೂರಿದರು.
ಅಂಬಾನಿ, ಅದಾನಿ ಸೇರಿದಂತೆ ಉದ್ಯಮಿಗಳ ಸಾಲ ಮನ್ನಾ ಮಾಡಿ ಅವರಿಗೆ ಆರ್ಥಿಕ ನೆರವು ನೀಡುತ್ತಿರುವ ಕೇಂದ್ರ ಸರ್ಕಾರ ಹತ್ತು ಹಲವು ಬಾರಿ ಮನವಿ ಮಾಡಿದರೂ ಬೆಳೆಗಾರರ ಸಾಲ ಮನ್ನಾ ಮಾಡುತ್ತಿಲ್ಲ, ಅದರ ಬದಲಿಗೆ ಅವರ ಜೀವನಾಡಿಯಾಗಿರುವ ಕಾಫಿ ಮಂಡಳಿಯನ್ನೇ ಮುಚ್ಚಲು ಮುಂದಾಗಿದೆ ಎಂದು ಆರೋಪಿಸಿದರು.
ಕಾಫಿ ಉದ್ಯಮ ಲಕ್ಷಾಂತರ ಜನರಿಗೆ ಬದುಕು ಕೊಟ್ಟಿದೆ, ಬೆಳೆಗಾರರು ಸಾವಿರಾರು ಕೋಟಿ ತೆರಿಗೆ ಕಟ್ಟುತ್ತಿದ್ದಾರೆ, ಕಾಫಿ ಉದ್ಯಮದಿಂದ ದೇಶಕ್ಕೆ ಸಾವಿರಾರು ಕೋಟಿ ವಿದೇಶಿ ವಿನಿಮಯ ದೊರೆಯುತ್ತಿದೆ, ಇಷ್ಟಿದ್ದರೂ ಸಹ ಉದ್ಯಮದ ಉಳಿವಿಗೆ ಕೇಂದ್ರ ಮುಂದಾಗಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಹತ್ತು ಹಲವು ಸಮಸ್ಯೆಗಳಿಂದ ಸೋತು ಸುಣ್ಣವಾಗಿರುವ ಕಾಫಿ ಬೆಳೆಗಾರರ ಕೈ ಹಿಡಿಯದಿದ್ದಲ್ಲಿ ಅವರು ಕಾಫಿ ಕೃಷಿಯನ್ನೇ ಕೈಬಿಡಬೇಕಾಗುತ್ತದೆ, ಮುಂದಾಗುವ ಅನಾಹುತಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯಗಳು ದೇಶದ ಜನತೆಯ ಸ್ವತ್ತು, ಅದನ್ನು ಮಾರಲು ಅಥವಾ ಮುಚ್ಚಲು ಯಾವ ಸರ್ಕಾರಗಳಿಗೂ ಅಧಿಕಾರವಿಲ್ಲ ಈ ಹಿನ್ನೆಲೆಯಲ್ಲಿ ಕಾಫಿ ಮಂಡಳಿ ಮುಚ್ಚುವ ವಿರುದ್ದ ಕಾಫಿ ಬೆಳೆಗಾರರು ಬೀದಿಗಿಳಿಯಬೇಕು ಎಂದು ಕರೆ ನೀಡಿದರು.
ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಸುರೇಶ್ ಮಾತನಾಡಿ ಕಾಫಿ ಬೆಳೆಗಾರರು ಪಕ್ಷಾತೀತವಾಗಿ ಒಗ್ಗೂಡಿ ಹೋರಾಟ ನಡೆಸಿದರೆ ಮಾತ್ರ ಅವರ ಸಮಸ್ಯೆ ಪರಿಹಾರವಾಗುತ್ತದೆ ಎಂದರು.
ಕೇಂದ್ರ ಸರ್ಕಾರ ಕಾಫಿ ಬೆಳೆಗಾರರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು, ಕಾಫಿ ಮಂಡಳಿಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು, ಕಾಳು ಮೆಣಸು ಆಮದು ಮಾಡಿಕೊಳ್ಳುತ್ತಿರುವುದನ್ನು ತಕ್ಷಣ ಕೈಬಿಡಬೇಕು, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರತ್ಯೇಕ ಕಾರಿಡಾರ್ ಯೋಜನೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಧರಣಿ ನಂತರ ಮೆರವಣಿಗೆಯಲ್ಲಿ ಸಾಗಿದ ಬೆಳೆಗಾರರು ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಮ್, ಅರಣ್ಯ ಇಲಾಖೆ ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಆಲ್ದೂರು ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಲವ, ಖಜಾಂಚಿ ತೌಸೀಫ್ ಆಲಿ, ಅಶೋಕ್, ಕೃಷ್ಣೇಗೌಡ, ಹೂವಪ್ಪ, ಲಕ್ಷ್ಮಣ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.