ಚಿಕ್ಕಮಗಳೂರು : ಮಾದಕ ವಸ್ತುಗಳು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುವುದರ ಜೊತೆಗೆ ವ್ಯಸನಿಯನ್ನು ಜೀವಸಮೇತ ಸುಡುತ್ತವೆ ಎಂದು ನರರೋಗ ತಜ್ಞ ಡಾ|| ಕೆ.ಆರ್.ವೆಂಕಟೇಶ್ ಎಚ್ಚರಿಸಿದರು.
ನಗರದ ಐಡಿಎಸ್‍ಜಿ ಕಾಲೇಜಿನ ಸಭಾಂಗಣದಲ್ಲಿ ಶ್ರೀಶಕ್ತಿ ವ್ಯಸನ ಮುಕ್ತಿ ಕೇಂದ್ರ ಮತ್ತು ಯುವ ರೆಡ್ ಕ್ರಾಸ್ ಘಟಕ ಗುರುವಾರ ಏರ್ಪಡಿಸಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯವಜನತೆ ಶೋಕಿ ಮತ್ತು ಕುತೂಹಲಕ್ಕಾಗಿ ಮಾದಕ ವಸ್ತುಗಳ ಸೇವನೆಗೆ ಮುಂದಾಗುತ್ತಾರೆ, ಆದರೆ ಕೆಲವೇ ದಿನಗಳಲ್ಲಿ ಅವರಿಗೇ ಅರಿವಿಲ್ಲದಂತೆ ಚಟವಾಗುತ್ತದೆ, ಮಾದಕವಸ್ತುಗಳ ಸೇವನೆಯಿಂದ ನರಗಳು ಉದ್ರೇಕಗೊಂಡು ನಂತರ ದುರ್ಬಲವಾಗುತ್ತವೆ, ಬುದ್ದಿ ಭ್ರಮಣೆಯಾಗಿ ಮಾನಸಿಕ ಖಿನ್ನತೆ ಉಂಟಾಗುತ್ತದೆ, ವ್ಯಸನಿ ಆಲೋಚನಾ ಶಕ್ತಿ, ವಿವೇಕ, ವಿವೇಚನೆ ಕಳೆದುಕೊಳ್ಳುತ್ತಾನೆ ಎಂದರು.
ಮಾದಕ ವಸ್ತುಗಳು ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ವ್ಯಸನಿಯನ್ನು ತುತ್ತಾಗಿಸುತ್ತವೆ, ಅವನನ್ನು ರಾಕ್ಷಸನನ್ನಾಗಿ ಪರಿವರ್ತಿಸುತ್ತವೆ, ವ್ಯಸನಿಗಳು ಹಣಕ್ಕಾಗಿ ಯಾವ ರೀತಿಯ ಅಪರಾಧ ಕೃತ್ಯಗಳನ್ನು ಬೇಕಾದರೂ ಮಾಡುತ್ತಾರೆ ಎಂದ ಅವರು ಹಾಗಾಗಿ ಯುವಜನತೆ ಅವುಗಳಿಂದ ದೂರವಿರಬೇಕು, ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ಸೇವನೆಗೆ ಮುಂದಾಗಬಾರದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ ಯುವ ಜನತೆ ಆಧ್ಯಾತ್ಮದ ಹಾದಿಯಲ್ಲಿ ಸಾಗುವುದರಿಂದ ಯೋಗ, ಧ್ಯಾನ ಮಾಡುವುದರಿಂದ ದುಶ್ಚಟಗಳಿಂದ ಮುಕ್ತರಾಗಿ ಬದುಕಬಹುದು ಎಂದು ಸಲಹೆ ಮಾಡಿದರು.
ಡಿವೈಎಸ್‍ಪಿ ಡಾ|| ಬಿ.ಎಸ್.ಅಂಗಡಿ ಮಾತನಾಡಿ ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದುದು ಆ ಅವಧಿಯಲ್ಲಿ ಬಹಳಷ್ಟು ಆಕರ್ಷಣೆಗಳಿರುತ್ತವೆ, ವಿದ್ಯಾರ್ಥಿಗಳು ಅವುಗಳಿಗೆ ಬಲಿಯಾದರೆ ಅವರ ಜೀವನ ಮತ್ತೆ ಮೇಲೇಳಲು ಆಗದಂತೆ ಪ್ರಪಾತಕ್ಕೆ ಬೀಳುತ್ತದೆ ಹಾಗಾಗಿ ಯುವಜನತೆ ಮಾದಕ ವಸ್ತುಗಳಿಂದ ದೂರವಿರಬೇಕು, ಓದುವುದು ಸೇರಿದಂತೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ|| ಎಸ್.ಈ.ನಟರಾಜ್ ಅಧ್ಯಕ್ಷತೆ ವಹಿಸಿದ್ದರು, ಶ್ರೀಶಕ್ತಿ ವ್ಯಸನ ಮುಕ್ತಿ ಕೇಂದ್ರದ ವ್ಯವಸ್ಥಾಪಕ ಮಂಜುನಾಥ್, ಹಿರಿಯ ನಾಗರೀಕ ಮತ್ತು ಅಂಗವಿಕಲ ಕಲ್ಯಾಣಾಧಿಕಾರಿ ಎಸ್.ಎನ್.ಶಿವಪ್ರಕಾಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸಿ.ಎಸ್.ಸುಶ್ಮಿತ ಕಾರ್ಯಕ್ರಮವನ್ನು ನಿರೂಪಿಸಿದರು, ವ್ಯಸನ ಮುಕ್ತಿ ಕೇಂದ್ರದ ಆಪ್ತ ಸಮಾಲೋಚಕಿ ಕವಿತಾ ಸ್ವಾಗತಿಸಿದರು, ಉಪನ್ಯಾಸಕ ಶ್ರೀನಿವಾಸ್ ವಂದಿಸಿದರು.










