ಚಿಕ್ಕಮಗಳೂರು : ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರೆ ಮಾತ್ರ ರೋಗಿಗಳ ಪ್ರಾಣ ಉಳಿಸಲು ವೈದ್ಯರಿಗೆ ಸಾಧ್ಯವಾಗುತ್ತದೆ ಎಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ಭೈರೇಗೌಡ ಹೇಳಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ಪ್ರಯುಕ್ತ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ನಗರದ ಕಾರ್ಮಿಕ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ರಕ್ತ ಅತ್ಯಂತ ಅಮೂಲ್ಯವಾದುದು, ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಬೇರೆ ಇಲ್ಲ, ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ ಅದನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಎಂದ ಅವರು ಸಾರ್ವಜನಿಕರು ಇದನ್ನು ಅರಿಯಬೇಕು ರಕ್ತದಾನವನ್ನು ತಮ್ಮ ಜವಾಬ್ದಾರಿಯೆಂದು ಪರಿಗಣಿಸಬೇಕು ಎಂದು ಕಿವಿಮಾತು ಹೇಳಿದರು.
ರಕ್ತದಾನ ಮಾಡುವುದರಿಂದ ದಾನಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ, ರಕ್ತದಾನದಿಂದ ದಾನಿಯ ದೇಹದಲ್ಲಿ ಇನ್ನೂ ಹೆಚ್ಚಿನ ರಕ್ತ ಉತ್ಪತ್ತಿಯಾಗುತ್ತದೆ, ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಬಾಬು ಶಂಕರ್ ಸಂಸ್ಥೆಯ ಶತಮಾನೋತ್ಸವ ವರ್ಷಾಚರಣೆ ಪ್ರಯುಕ್ತ ಇಡೀ ವರ್ಷ ಜಿಲ್ಲೆಯ ವಿವಿಧ ಭಾಗಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಕಾರ್ಮಿಕ ಇಲಾಖೆಯ ನೌಕರರು ಮತ್ತು ಸರ್ಕಾರಿ ನೌಕರರ ಸಂಘದ ಸದಸ್ಯರು ಶಿಬಿರದಲ್ಲಿ ರಕ್ತದಾನ ಮಾಡಿದರು. ಹೋಲಿಕ್ರಾಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಾರ್ಮಿಕ ಅಧಿಕಾರಿ ಕೃಷ್ಣಮ್ಮ ಶಿಬಿರಕ್ಕೆ ಚಾಲನೆ ನೀಡಿದರು, ಹಿರಿಯ ಕಾರ್ಮಿಕ ನಿರೀಕ್ಷಕ ರವಿಕುಮಾರ್, ರೆಡ್‍ಕ್ರಾಸ್ ಮಾಜಿ ಅಧ್ಯಕ್ಷ ಡಾ|| ಸುಂದರಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆಚ್.ಕೆ.ಗೋವಿಂದರಾಜು ಹಾಜರಿದ್ದರು.










