ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆಯನ್ನು ಮಂಗಳವಾರ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದ್ದು, ಇದನ್ನು ಉಭಯ ಸದನಗಳ ಜಂಟಿ ಸಮಿತಿಗೆ ಶಿಫಾರಸು ಮಾಡಬಹುದು. ಒಂದು ದೇಶ, ಒಂದು ಚುನಾವಣೆ” ಮಸೂದೆ ಎಂದು ಉಲ್ಲೇಖಿಸಲ್ಪಡುವ ಸಂವಿಧಾನ ತಿದ್ದುಪಡಿ ಮಸೂದೆ, 2024 ಅನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ನಾಳೆ ಲೋಕಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಸೂದೆ ಮಂಡಿಸಿದ ನಂತರ, ವ್ಯಾಪಕ ಸಮಾಲೋಚನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಶಿಫಾರಸು ಮಾಡುವಂತೆ ಮೇಘವಾಲ್ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡುವ ಸಾಧ್ಯತೆ ಇದೆ.










