ಉಡುಪಿ: ಪೇಜಾವರ ಸ್ವಾಮೀಜಿಯ ತುಲಾಭಾರದ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದ ಘಟನೆ ನಡೆದಿದೆ.
ಪ್ರಸ್ತುತ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ದೆಹಲಿ ಪ್ರವಾಸದಲ್ಲಿದ್ದಾರೆ. ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಹತ್ವದ ಧಾರ್ಮಿಕ ಆಚರಣೆಯಾದ ಚಾತುರ್ಮಾಸ್ಯ ಕಾರ್ಯಕ್ರಮ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳಿಗೆ ಭಕ್ತರು ತುಲಾಭಾರ ಸೇವೆ ನಡೆಸುತ್ತಿದ್ದಾಗ ಈ ಅಚಾತುರ್ಯ ನಡೆದಿದೆ.
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ತುಲಾಭಾರ ಮಾಡಲಾಗುತ್ತಿತ್ತು. ಆ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದಿದೆ. ತಕ್ಕಡಿಯ ಸರಳು ಪೇಜಾವರ ಶ್ರೀಗಳ ತಲೆಯ ಮೇಲೆ ಬಿದ್ದಿದೆ. ತಲೆಗೆ ಚಿಕ್ಕ ಗಾಯವಾಗಿದ್ದು, ಪೇಜಾವರ ಶ್ರೀಗಳು ಅನಾಹುತದಿಂದ ಪಾರಾಗಿದ್ದಾರೆ. ತರಚಿದ ಗಾಯದೊಂದಿಗೆ ಪೇಜಾವರ ಶ್ರೀಗಳು ಸುರಕ್ಷಿತವಾಗಿದ್ದಾರೆ ಎಂದು ಮಠದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.










