ಬೆಂಗಳೂರು : ಕೊರೊನಾ ನಿಯಂತ್ರಣಕ್ಕೆ ಇಂದಿನಿಂದ ರಾಜ್ಯಾದ್ಯಂತ ಬಿಗಿ ಲಾಕ್ ಡೌನ್ ಜಾರಿಯಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಲಾಕ್ ಡೌನ್ ಅಲ್ಲದ ಕಠಿಣ ಲಾಕ್ ಡೌನ್. ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ ಡೌನ್ ಇಂದಿನಿಂದ ಜಾರಿಗೆ ಬರಲಿದೆ. ಜನಸಂಚಾರ ತಡೆಯುವುದೇ ಲಾಕ್ ಡೌನ್ ಎಂದು ಭಾವಿಸಿರುವ ಸರ್ಕಾರ, ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ. ನಾವು ಸೂಚಿಸಿದ ಲಾಕ್ ಡೌನ್ ಇದಾಗಿರಲಿಲ್ಲ. ನಾವು ಹೇಳಿದ್ದು ಜನಹಿತದ ಲಾಕ್ ಡೌನ್ ಆಗಿತ್ತು ಎಂದರು.
ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಕಾಯದೇ ಲಾಕ್ ಡೌನ್ ಮಾಡಿವೆ. ಜನರಿಗೆ ಆಹಾರ ಸೇರಿದಂತೆ ಪರಿಹಾರ ಘೋಷಿಸಿವೆ. ಆಂಧ್ರದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಇದು ಸರ್ಕಾರಗಳ ಜವಾಬ್ದಾರಿಯುತ ನಡೆ. ಆದರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೇಂದ್ರದ ದುರ್ನಡೆಯನ್ನು ರಾಜ್ಯ ಅನುಸರಿಸಬಾರದು ಎಂದು ಹೇಳಿದ್ದಾರೆ.
ಲಾಕ್ ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ನಾನು ಮೊದಲೇ ಹೇಳಿದ್ದೆ. ಹಾಗೆ ಹೇಳುವಾಗ ಲಾಕ್ ಡೌನ್ ನಿಂದ ಜನ ಜೀವನಕ್ಕೆ ಆಗುವ ತೊಂದರೆಗಳಿಗೆ ಪರಿಹಾರ ಕ್ರಮಗಳಿರಬೇಕು. ಜನರ ಅಗತ್ಯವನ್ನು ಸರ್ಕಾರ ಭರಿಸಬೇಕೆಂದು ಹೇಳಿದ್ದೆ. ಆದರೆ, ಲಾಕ್ ಡೌನ್ ಸಂದರ್ಭದಲ್ಲಿ ನೀಡಬೇಕಾದ ಪರಿಹಾರ ಕ್ರಮಗಳಿಂದ ವಿಮುಖವಾಗಿರುವ ಸರ್ಕಾರ ಬೇಜವಾಬ್ದಾರಿತನ ತೋರಿದೆ ಎಂದರು.
ಮನೆಗಳಿಂದ ಹೊರ ಬರುವ ಜನರ ಮೇಲೆ ದರ್ಪ ಪ್ರದರ್ಶಿಸುವುದನ್ನು ಬಿಟ್ಟು ಜನ ಹೊರಗೆ ಬಾರದಂತೆ ಅವರ ಅಗತ್ಯಗಳನ್ನು ಪೂರೈಸುವ, ಪರಿಹಾರ ಒದಗಿಸುವ ಕ್ರಮಗಳತ್ತ ಸರ್ಕಾರ ಗಮನಹರಿಸಬೇಕು. ಈ ವಿಚಾರದಲ್ಲಿ ನೆರೆ ರಾಜ್ಯಗಳು ಅನುಸರಿಸುತ್ತಿರುವ ಕ್ರಮಗಳನ್ನು ರಾಜ್ಯ ಅವಲೋಕಿಸಬೇಕು. ಜನರ ಆರೋಗ್ಯ ಎಷ್ಟು ಮುಖ್ಯವೋ ಜನರ ಬದುಕೂ ಅಷ್ಟೇ ಮುಖ್ಯವಾಗಬೇಕು ಎಂದಿದ್ದಾರೆ.










