ಬಾಗಲಕೋಟೆ: ಕಬ್ಬು ತುಂಬಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಬಳಿಯ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕಾಮಾಕ್ಷಿ ಬಡಿಗೇರ(30), ತುಕಾರಾಮ ತಳೇವಾಡ(30) ಮಲ್ಲು ಪೂಜಾರಿ(25), ಕಲ್ಲು ಕವಟಗಿ(35) ಮೃತ ದುರ್ದೈವಿಗಳು. ಮೃತರೆಲ್ಲರೂ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೊನಗನಹಳ್ಳಿ ಗ್ರಾಮದವರು ಎಂದು ತಿಳಿದುಬಂದಿದೆ.
ಬಾದಾಮಿ ಬನಶಂಕರಿ ಜಾತ್ರೆಗೆ ಹೋಗಿ, ವಾಪಸ್ ಆಗುವಾಗ ಅನಗವಾಡಿ ಗ್ರಾಮದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಮಹಿಳೆ, ನಾಲ್ವರು ಸ್ಥಳದಲ್ಲೇ ಸಾವೀಗಿಡಾಗಿದ್ದಾರೆ.
ಇನ್ನು ಘಟನೆ ಬೆನ್ನಲ್ಲೇ ಸ್ಥಳಕ್ಕೆ ಬಾಗಲಕೋಟೆ ಎಸ್‍ಪಿ ಅಮರನಾಥ ರೆಡ್ಡಿ ಭೇಟಿ ನೀಡಿದ್ದು, ಜೆಸಿಬಿ ಮೂಲಕ ಕಬ್ಬು ತೆರವುಗೊಳಿಸಿ ಕಾರು ಹೊರ ತೆಗೆಯಲಾಯಿತು. ಇತ್ತ ಮೃತದೇಹಗಳನ್ನು ಬೀಳಗಿ ತಾಲೂಕಾಸ್ಪತ್ರೆಗೆ ಶವಪರೀಕ್ಷೆಗೆ ಕೊಂಡೊಯ್ಯಲಾಯಿತು. ಸ್ಥಳದಲ್ಲಿ ಮೃತರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಕುರಿತು ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.