ಬೆಂಗಳೂರು : ಮಹಿಳೆಯರ ರಕ್ಷಣೆಗಾಗಿ ಬೆಂಗಳೂರು ಪೊಲೀಸರು ಹೊಸ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಹೈದರಾಬಾದ್‍ನ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತ ಪೊಲೀಸರು ಮಹಿಳೆಯರ ರಕ್ಷಣೆಗಾಗಿ ಉಚಿತ ಸವಾರಿ ಎಂಬ ಯೋಜನೆಯನ್ನು ಜಾರಿ ಮಾಡಿದ್ದಾರೆ. ಈ ಯೋಜನೆಯಿಂದ ರಾತ್ರಿ 10 ಗಂಟೆಯಿಂದ ಮುಂಜಾನೆ 6ಗಂಟೆಯವರೆಗೆ ಮಹಿಳೆಯರು ಉಚಿತ ಸವಾರಿ ಯೋಜನೆಯನ್ನು ಉಪಯೋಗಿಸಿಕೊಳ್ಳಬಹುದು. ರಾತ್ರಿ ಸಮಯದಲ್ಲಿ ಮಹಿಳೆಯರು ಮನೆಗೆ ತೆರಳಲು ಬಸ್ ಹಾಗೂ ಇತರೆ ಸಾರಿಗೆ ವ್ಯವಸ್ಥೆಯಲ್ಲಿ ಸಮಸ್ಯೆ ಇದ್ದಲ್ಲಿ 1091 ನಂಬರ್‍ಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದರೆ ಕೂಡಲೇ ಸಿಬ್ಬಂದಿಗಳು ಮಹಿಳೆಯರು ಇರುವ ಸ್ಥಳ ಹಾಗೂ ಅವರು ತಲುಪಬೇಕಾದ ಸ್ಥಳದ ಮಾಹಿತಿಯನ್ನು ಪಡೆದು ಮಹಿಳೆ ಇರುವ ಸ್ಥಳಕ್ಕೆ ಸಮೀಪವಿರುವ ಪೊಲೀಸ್ ಠಾಣೆಯಿಂದ ಹೊಯ್ಸಳ ವಾಹನವನ್ನು ಕಳುಹಿಸಲಾಗುತ್ತದೆ. ಬಳಿಕ ಹೊಯ್ಸಳ ವಾಹನದ ಸಿಬ್ಬಂದಿ ಮಹಿಳೆಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತಾರೆ ಎನ್ನಲಾಗಿದೆ.










