ಮಂಗಳೂರು: ಅಡ್ಯಾರ್ ಬಳಿ ಐಸ್‌ಕ್ರೀಂ ಘಟಕದ ಎಳನೀರು ಸೇವಿಸಿ 15 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು…

39
firstsuddi

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ಐಸ್‌ಕ್ರೀಂ ಘಟಕವೊಂದರಲ್ಲಿ ಎಳನೀರು ಸೇವಿಸಿ ಸುಮಾರು 15 ಮಂದಿ ಸಾರ್ವಜನಿಕರು ಅಸ್ವಸ್ಥಗೊಂಡಿದ್ದಾರೆ.

ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಏಪ್ರಿಲ್ 8 ರಂದು ಎಳನೀರು ಖರೀದಿಸಿದ್ದರು ಮತ್ತು ಮರುದಿನ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಳನೀರು ಕುಡಿದ ಬಳಿಕ ಅವರಲ್ಲಿ ವಾಂತಿ ಮತ್ತು ಭೇದಿ ಆರಂಭವಾಗಿತ್ತು. ಐಸ್‌ಕ್ರೀಂ ಘಟಕದಲ್ಲಿ ಪ್ರತಿ ಲೀಟರ್‌ಗೆ 40 ರೂ. ಬೆಲೆಯಲ್ಲಿ ಎಳನೀರು ಮಾರಾಟ ಮಾಡಲಾಗುತ್ತದೆ. ಹೀಗಾಗಿ ಈ ಪ್ರದೇಶದ ಹಲವಾರು ಜನ ಅದನ್ನು ಖರೀದಿಸುತ್ತಾರೆ.

ಸದ್ಯ ಅಸ್ವಸ್ಥಗೊಂಡ ಮೂವರಿಗೆ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ 12 ಮಂದಿ ಹೊರರೋಗಿಗಳಾಗಿ ಔಷಧಿ ಪಡೆದಿದ್ದಾರೆ. ಘಟನೆ ಬಳಿಕ ಆಸ್ಪತ್ರೆ ಹಾಗೂ ಫ್ಯಾಕ್ಟರಿಗೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಳನೀರಿನ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ. ಅಲ್ಲದೇ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನ ಆತಂಕಕ್ಕೆ ಒಳಗಾಗಬಾರದು ಎಂದು ಆರೋಗ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.