ಮದ್ಯದ ಅಮಲಿನಲ್ಲಿ ಕಟ್ಟಿಗೆಯಿಂದ ಹೊಡೆದು ಪತ್ನಿಯ ಕೊಲೆ; ಆರೋಪಿ ಪತಿಯ ಬಂಧನ…

132
firstsuddi

ಬೆಳ್ತಂಗಡಿ : ಮದ್ಯದ ಅಮಲಿನಲ್ಲಿ ಪತಿಯು ಪತ್ನಿಯನ್ನು ಹೊಡೆದು ಹತ್ಯೆ ಮಾಡಿರುವ ಘಟನೆ ತಾಲೂಕಿನ ನೆರಿಯಾ ಗಂಡಿಬಾಗಿಲು ಸಮೀಪ ನಡೆದಿದೆ. ನೆರಿಯಾ ಗ್ರಾಮದ ಗಂಡಿಬಾಗಿಲು ನಿವಾಸಿ ಸೌಮ್ಯಾ ಫ್ರಾನ್ಸಿಸ್ (40)ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಪತಿ ಜಾನ್ಸನ್ (47) ಕೊಲೆ ಆರೋಪಿ. ಪತಿ-ಪತ್ನಿ ಇಬ್ಬರೂ ರಬ್ಬರ್ ಟ್ಯಾಪಿಂಗ್ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಇವರೊಳಗೆ ಜಗಳ ಸಾಮಾನ್ಯವಾಗಿದ್ದು, ನಿನ್ನೆ ರಾತ್ರಿ ಇದು ವಿಕೋಪಕ್ಕೆ ತಿರುಗಿ ಪತಿ ಜಾನ್ಸನ್ ಕಟ್ಟಿಗೆಯ ತುಂಡಿನಲ್ಲಿ ಸೌಮ್ಯಾರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾದ ಸೌಮ್ಯ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಇದರಿಂದ ಗಾಬರಿಗೊಂಡ ಜಾನ್ಸನ್ ತಕ್ಷಣ ಅವರನ್ನು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಸೌಮ್ಯಾ ಅವರ ಸಹೋದರ ಸನೋಜ್ ಫ್ರಾನ್ಸಿಸ್ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಂತೆ ಜಾನ್ಸನ್ ನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.